ಚಾಮರಾಜನಗರ: ಚಾಮುಲ್‌ನಲ್ಲಿ ಐಸ್‌ಕ್ರೀಂ ಘಟಕ ಸ್ಥಾಪನೆ ವಿರುದ್ಧ ಹೋರಾಟ ನಡೆಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲು ಕೊಚ್ಚಿಹಾಕುತ್ತೇವೆ ಎಂದು ಹೇಳಿಕೆ ನೀಡಿರುವ ರೈತ ಮುಖಂಡ ಹೊನ್ನೂರು ಪ್ರಕಾಶ್ ವಿರುದ್ಧ ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಕಾಲದಿಂದಲೂ ರೈತಸಂಘಟನೆ ಮೇಲೆ ಗೌರವ ಇಟ್ಟುಕೊಂಡಿದ್ದಾರೆ. ರೈತರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದಾರೆ. ಆದರೆ ಅಂತವರ ವಿರುದ್ಧ ರೈತಮುಖಂಡ ಹೊನ್ನೂರು ಪ್ರಕಾಶ್ ಬಹಳ ತುಚ್ಛವಾಗಿ ಮಾತುಗಳನ್ನಾಡಿದ್ದಾರೆ. ಹಸಿರು ಶಾಲು ಹಾಕಿಕೊಂಡಿದ್ದೇವೆ ಎಂಬ ಕಾರಣಕ್ಕೆ ಅಂತಹ ಪದ ಬಳಕೆ ಮಾಡಬಾರದು. ಅವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಹಲವಾರು ಹೋರಾಟಗಳ ಸಂದರ್ಭದಲ್ಲಿ ಹೊನ್ನೂರು ಪ್ರಕಾಶ್ ಅವರು, ಅರಣ್ಯ ಇಲಾಖೆ, ಕೆಇಬಿ, ಪೊಲೀಸರು ಹಾಗೂ ಇನ್ನಿತರೆ ಅಧಿಕಾರಿಗಳನ್ನು ತುಚ್ಛ ಮಾತುಗಳಿಂದ ನಿಂದಿಸುತ್ತಾರೆ. ಅಧಿಕಾರಿಗಳು ಬದುಕುತ್ತಿರುವವರೇ ನಮ್ಮಿಂದ ಎಂದು ಹೇಳುತ್ತಾರೆ. ಅಂತಹ ಪ್ರಮಾಣಿಕ ಹೋರಾಟಗಾರರಾಗಿದ್ದರೆ ವಿಶ್ವ ಗುರು ವಿವಿದೊದ್ಧೇಶ ಸಹಕಾರ ಸಂಘದಲ್ಲಿ ನಡೆದ ಅವ್ಯವಹಾರದ ವಿರುದ್ಧ ಯಾಕೇ ಹೋರಾಟ ಮಾಡಲಿಲ್ಲ. ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡುಸುವುದನ್ನು ಅವರು ಬಿಡಬೇಕು. ತಮ್ಮ ಮಾತಿನ ರೀತಿಯನ್ನು ಬದಲಾಯಿಸಿಕೊಳ್ಳಬೇಕು ಎಂದರು.
ಹೊನ್ನೂರು ಪ್ರಕಾಶ್ ಅವರು ದಲ್ಲಾಳಿಗಳ ಜತೆ ಸೇರಿಕೊಂಡು ಐಸ್ ಕ್ರೀಂ ಘಟಕ ಸ್ಥಾಪನೆ ವಿರುದ್ಧ ಹೋರಾಟವನ್ನು ಮಾಡುತ್ತಿದ್ದಾರೆ. ರೈತರು ಬೆಳೆದ ಆಹಾರ ಪದಾರ್ಥಗಳ ಮೇಲೆ ವೈ.ಸಿ.ನಾಗೇಂದ್ರ ದಲ್ಲಾಳಿ ಕೆಲಸ ಮಾಡುತ್ತಿದ್ದಾರೆ. ವೈ.ಸಿ.ನಾಗೇಂದ್ರ ಅವರು ಚಾಮುಲ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೇ ಐಸ್ ಕ್ರೀಂ ಘಟಕ ಸ್ಥಾಪನೆಗೆ ನಿರ್ಣಯ ತೆಗೆದುಕೊಂಡಿದ್ದರು. ಅಧ್ಯಕ್ಷ ಸ್ಥಾನದಿಂದ ಇಳಿದ ನಂತರ ವಿರೋಧ ಮಾಡುತ್ತಿದ್ದಾರೆ. ಖಾಸಗಿಯವರಿಗೆ ಬೆಂಬಲ ನೀಡುವುದಕ್ಕಾಗಿ ಈಗ ವಿರೋಧ ಮಾಡುತ್ತಿರಬಹುದು ಎಂದು ದೂರಿದರು.
ಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಮಹದೇವ್, ಮಾಜಿ ಸದಸ್ಯ ರಾಜೇಂದ್ರ ಸ್ವಾಮಿ, ಮುಖಂಡ ಶಿವಮೂರ್ತಿ, ಸೋಮಣ್ಣ, ಮಹದೇವಪ್ರಸಾದ್ ಹಾಜರಿದ್ದರು.