ವಾದಿರಾಜ ವ್ಯಾಸಮುದ್ರ ಕಲಬುರಗಿ
ಕರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಇದ್ದ ದಿಗ್ಬಂಧನ ಮತ್ತು ತಾನು ಬೆಳೆದ ಬೆಳೆ ಮಾರಲು ದಾರಿ ಕಾಣದೇ ಸಾವಿಗೆ ಶರಣಾದ ರೈತ ಚಂದ್ರಕಾಂತ ಬಿರಾದಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ತುರ್ತುಕ್ರಮಕ್ಕೆ ಮುಂದಾಗಿದೆ. ಇದು ರೈತ ವಲಯದಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದೆ.
ಕರೊನಾ ತನ್ನ ಕೆನ್ನಾಲಿಗೆಯನ್ನು ಚಾಚಿದ ನಂತರ ರಾಜ್ಯ ಸರ್ಕಾರ ಅದರ ವಿರುದ್ಧ ಸಮರ ಸಾರಿದೆ. ಈ ಮಧ್ಯೆ ರೈತರ ಸೇರಿ ಲಕ್ಷಾಂತರ ಕುಟುಂಬಗಳನ್ನು ರಕ್ಷಿಸುವ ಹೊಣೆಗಾರಿಕೆಯ ದೊಡ್ಡ ಸವಾಲು ಸರ್ಕಾರದ ಮುಂದಿದೆ. ದೇಶಕ್ಕೆ ಕಾಲಿಟ್ಟ ಕರೊನಾ ವೈರಸ್ನಿಂದ ಮೊದಲ ಸಾವಾಗಿದ್ದು ಕಲಬುರಗಿಯಲ್ಲಿ ಎಂಬ ಕಳಂಕದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಾಕ್ಡೌನ್ ಘೋಷಿಸಲಾಯಿತು. ಇದರ ಎಫೆಕ್ಟ್ನಿಂದ ಅನ್ನದಾತ ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಯೂ ರಾಜ್ಯದಲ್ಲಿ ಮೊದಲನೆಯದಾಗಿರುವುದು ದಾರುಣದ ಸಂಗತಿ.
ಈ ಸಾವಿನ ಸುದ್ದಿ ವಿಜಯವಾಣಿ ಮತ್ತು ದಿಗ್ವಿಜಯ ಚಾನಲ್ದಲ್ಲಿ ಪ್ರಕಟವಾಗುತ್ತಲೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬುಧವಾರ ಹಲವು ಸಚಿವರು ಮತ್ತು ಅಧಿಕಾರಿಗಳು ಸಭೆ ಸೇರಿ ರೈತರಲ್ಲಿ ಧೈರ್ಯ ತರುವ ಮಹತ್ವದ ನಿರ್ಣಯಗಳನ್ನು ಕೈಕೊಂಡಿದ್ದು ಹಸಿರು ಶಾಲುಧಾರಿಯಲ್ಲಿ ಹೊಸ ವಿಶ್ವಾಸ ಮೂಡಿಸಿದೆ.
ಆಳಂದ ತಾಲೂಕಿನ ಹಿತ್ತಲ ಶಿರೂರು ಗ್ರಾಮದ ಚಂದ್ರಕಾಂತ ಬಿರಾದಾರ ಈ ಸಲ ಸಾಕಷ್ಟು ಆಸೆ ಇಟ್ಟುಕೊಂಡು ಸುಮಾರು 5.40 ಲಕ್ಷ ರೂ. ಸಾಲವನ್ನು ಬ್ಯಾಂಕಿನಿಂದ ಪಡೆದು ತಮ್ಮ ಜಮೀನಿನ ಒಂದು ಭಾಗದಲ್ಲಿ ಕಲ್ಲಗಂಡಿ ಬೆಳೆದಿದ್ದರು. ಒಂದಕ್ಕಿಂತ ಒಂದು ಕಲ್ಲಂಗಡಿ ತೂಕ ತರುವಂತಿದ್ದವು. ಬೇಸಿಗೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿಯೇ ತೆರೆದ ಮಾರುಕಟ್ಟೆಯಲ್ಲಿ ಸಾಕಷ್ಟು ಕಲ್ಲಂಗಡಿ ಹಣ್ಣು ಮಾರಾಟವಾಗುತ್ತದೆ. ಇದೇ ಭರವಸೆ ಬಿರಾದಾರ ಅವರಲ್ಲಿತ್ತು.
ಆದರೆ ಕರೊನಾ ಎಂಬ ಮಾರಿಗೆ ಜಿಲ್ಲೆ ಲಾಕ್ಡೌನ್ ಆಗಿದ್ದರಿಂದ ರೈತನಿಗೆ ಕಲ್ಲಂಗಡಿ ಮಾರುವ ದಿಕ್ಕು ತೋಚಲಿಲ್ಲ. ಬೆಳೆದ ಕಲ್ಲಂಗಡಿ ಕೊಳೆಯುತ್ತ ಹೋಯಿತು. ಒಂದೆಡೆ ಕೈಗೆ ಬಂದ ಫಸಲಿಗೆ ಮಾರುಕಟ್ಟೆ ಸೌಲಭ್ಯ ಸಿಗಲಿಲ್ಲ. ಇನ್ನೊಂದೆಡೆ ಇದಕ್ಕಾಗಿ ಮಾಡಿದ ಸಾಲವನ್ನು ತೀರಿಸುವುದೂ ಆಗಲಿಲ್ಲ. ಇದೆಲ್ಲದರಿಂದ ಹೆದರಿದ ಚಂದ್ರಕಾಂತ ತಮ್ಮ ಹೊಲದಲ್ಲಿದ್ದ ಹುಣಸೆ ಮರಕ್ಕೆ ಸೋಮವಾರ ರಾತ್ರಿ ನೇಣು ಹಾಕಿಕೊಂಡು ಪ್ರಾಣ ಬಿಟ್ಟು ತುಂಬು ಕುಟುಂಬ ಬೀದಿಗೆ ಬರುವಂತೆ ಮಾಡಿದರು.
ಈ ಪರಿಸ್ಥಿತಿ ಕೇವಲ ಒಬ್ಬ ರೈತನ್ನದ್ದಲ್ಲ. ಬದಲಿಗೆ ಲಕ್ಷಾಂತರ ರೈತರ ಬದುಕು ಕರೊನಾದಿಂದಾಗಿ ಬೀದಿಗೆ ಬಂದಿದೆ. ಅನ್ನದಾತನೇ ಅನ್ನವಿಲ್ಲದಂತಾಗಿದ್ದಾನೆ. ಎಲ್ಲದಕ್ಕೂ ಸಾವೇ ಮುಖ್ಯವಲ್ಲ, ತಮ್ಮನ್ನು ನಂಬಿಕೊಂಡು ತಮ್ಮ ಕುಟುಂಬದ ಸದಸ್ಯರೂ ಇದ್ದಾರೆ ಎಂಬ ಧೈರ್ಯ ರೈತನಲ್ಲಿ ಬರುತ್ತಿಲ್ಲದಿರುವುದೇ ಆತಂಕಕ್ಕೆ ಕಾರಣವಾಗಿದೆ.
ರೈತರು ತಾವು ಬೆಳೆದ ಹಣ್ಣು, ತರಕಾರಿ, ಬೇಳೆ-ಕಾಳು, ಹೂವು, ಮೆಣಸಿನಕಾಯಿ ಹೀಗೆ ಹತ್ತಾರು ವಸ್ತುಗಳನ್ನು ಕರೊನಾ
ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ತರಬೇಕೆಂದರೆ ಅದು ಸಾಧ್ಯವಾಗುತ್ತಿಲ್ಲ. ಆಳಂದ ತಾಲೂಕಿನ ರೈತನ ಸಾವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ರ ಕ್ರಮಕ್ಕೆ ಮುಂದಾಗಿದೆ. ನಿಮ್ಮ ವಸ್ತುಗಳನ್ನು ಮಾರುಕಟ್ಟೆಗೆ ಕೊಡಿ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕರೊನಾ ವಿರುದ್ಧ ಸಮರ ಸಾರಲು ಮುಂದಾಗಿ ಎಂದು ರೈತರಲ್ಲಿ ಮನವಿ ಮಾಡಿದೆ. ಮೃತ ಚಂದ್ರಕಾಂತ ಕುಟುಂಬಕ್ಕೆ ತೋಟಗಾರಿಕೆ ಸಚಿವ ನಾರಾಯಣಗೌಡರು ಇಲಾಖೆಯಿಂದ ಐದು ಲಕ್ಷ ರೂ. ಪರಿಹಾರ ಘೋಷಿಸಿ ರೈತರೂ ಸಾವಿಗೆ ಶರಣಾಗಬೇಡಿ. ನಿಮಗಾಗಿಯೇ ಕಾಲ್ ಸೆಂಟರ್ ತೆರೆಯಲಾಗಿದೆ. ಅಲ್ಲಿ ನಿಮ್ಮ ಸಮಸ್ಯೆ ಹೇಳಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ರೈತರ ಬಳಿಯೇ ಸರ್ಕಾರ ತೆರಳಿ ಅವರ ಬೆಳೆ ಖರೀದಿಸಲು ಮುಂದಾಗಿದೆ. ರೈತರಿಗೆ ಯಾವುದೆ ತೊಂದರೆ ಆಗದಂತೆ ಮಾರುಕಟ್ಟೆ ವ್ಯವಸ್ಥೆ ಮಾಡುವ ಭರವಸೆ ಕೃಷಿ ಸಚಿವ ಬಿ.ಸಿ. ಪಾಟೀಲ್ರಿಂದ ಬಂದಿದೆ.
ಸರ್ಕಾರದ ಕ್ರಮಗಳು
*ರೈತರ ಪರಿಹಾರಕ್ಕೆ ಕೃಷಿ ಇಲಾಖೆಯಿಂದ ವಾರ್ ರೂಂ. ಸಮಯ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ
*ರೈತರಿಗೆ ಮಾಹಿತಿ ನೀಡಲು ಕೃಷಿ ಅಧಿಕಾರಿಗಳಗೆ ಸಲಹೆ
*ಎಲ್ಲ ಕಡೆ ಎಪಿಎಂಸಿಗಳು ಓಪನ್
*ಹಣ್ಣು-ತರಕಾರಿ ಸಾಗಾಣೆಗೆ ಆದೇಶ ನೆರೆ ರಾಜ್ಯಗಳಿಗೂ ಸಾಗಿಸಲು ಸೂಚನೆ (ಕೇರಳ ಹೊರತುಪಡಿಸಿ)
*ಚೆಕ್ಪೋಸ್ಟ್ಗಳಲ್ಲಿ ವಾಹನ ತಡೆಯದಂತೆ ಆದೇಶ
*ಕೆಎಂಎಫ್ನಿಂದ ಹಾಲು ಖರೀದಿಗೆ ಕ್ರಮ
*ಎಪಿಎಂಸಿ ಮೂಲಕವೇ ವ್ಯಾಪಾರ ಮಾಡಲು ರೈತರಿಗೆ ಮನವಿ
*ಸಾಮಾಜಿಕ ಅಂತರ ಕಾದುಕೊಳ್ಳುವುದು ಅಗತ್ಯ.ಹಣ್ಣು ತರಕಾರಿಗಳನ್ನು ರೈತರ ಬಳಿಯಿಂದ ಹಾಪ್ಕಾಮ್ಸ್ಗೆ ತರಲು ಒಂದೊಂದು ಲಾರಿ ಮೀಸಲು
ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿವೆ. ಸಾರ್ವಜನಿಕರು ಮನೆಯಿಂದ ಹೊರಬಾರದು. ಈ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ಕರೊನಾ ಸೋಂಕು ತಡೆಯಲು ಮುಂದಾಗಬೇಕು. ವಿಶೇಷವಾಗಿ ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಮುಂದಾಗಬಾರದು.
ಸಿದ್ರಾಮಪ್ಪ ಪಾಟೀಲ್ ಧಂಗಾಪುರ ಅಧ್ಯಕ್ಷ, ಜಿಲ್ಲಾ ಕೃಷಿಕ ಸಮಾಜ ಕಲಬುರಗಿ.