ಚಾಮರಾಜನಗರ: ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ, ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ ವಿಭಾಗದ ರಿವಾರ್ಡ್ ಯೋಜನೆಯಡಿ ಬುಧವಾರ ಕಡಲೆಕಾಯಿ ಬೆಳೆ ಕ್ಷೇತ್ರೋತ್ಸವ ನಡೆಯಿತು.
ತಾಲೂಕಿನ ಹೆಗ್ಗೋಠಾರ ಗ್ರಾಮದ ರೈತ ರಮೇಶ್ ಅವರ ಜಮೀನಿನಲ್ಲಿ ನಡೆದ ಕಡಲೆಕಾಯಿ ಬೆಳೆಯಲ್ಲಿ ಭೂ ಸಂಪನ್ಮೂಲ ಆಧಾರಿತ ರಸ ಗೊಬ್ಬರಗಳ ಬಳಕೆ ಪ್ರಾತ್ಯಕ್ಷಿಕೆಗಳ ಕ್ಷೇತ್ರೋತ್ಸವದಲ್ಲಿ ರಿವಾರ್ಡ್ ಯೋಜನೆಯ ಸಹಪ್ರಧಾನ ಸಂಶೋಧಕಿ ಡಾ.ಬಿ.ಮಮತಾ ಮಾತನಾಡಿ, ಕಡಲೆಕಾಯಿ ಬೆಳೆಯಲ್ಲಿ ಮಣ್ಣು ಪರೀಕ್ಷೆ ಹಾಗೂ ಭೂ ಸಂಪನ್ಮೂಲ ಮಾಹಿತಿ ಆಧಾರಿತವಾಗಿ ಸಸ್ಯ ಪೋಷಣೆ ಕೈಗೊಳ್ಳುವುದರ ಕುರಿತು ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಯೋಗೇಶ್ ಮಾತನಾಡಿ, ಲೆಕ್ಕಾಚಾರವಿಲ್ಲದೆ ಬೇಸಾಯದಲ್ಲಿ ಬಳಸುವ ರಾಸಾಯನಿಕಗಳಿಂದ ಆಗುವ ಪ್ರತಿಕೂಲ ಪರಿಣಾಮಗಳು, ಅದರಲ್ಲೂ ರಸಗೊಬ್ಬರಗಳ ಅಸಮರ್ಪಕ ಬಳಕೆಯಿಂದ ಮಣ್ಣು ಮತ್ತು ಸಸ್ಯ ಬೆಳವಣಿಗೆಯಲ್ಲಿ ಉಂಟಾಗುವ ಅಸಮತೋಲನಗಳು ಮತ್ತು ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದರು.
ಪ್ರಗತಿಪರ ರೈತ ಪಾಪಣ್ಣ ಮಾತನಾಡಿ, ಪ್ರಸ್ತುತ ಕಡಲೆಕಾಯಿ ಬೇಸಾಯದಲ್ಲಿ ಶಿಫಾರಸ್ಸಿನ ಕ್ರಮಗಳನ್ನು ಅನುಸರಿಸಿದ್ದಾಗಿಯೂ ಮಳೆಯ ವ್ಯತ್ಯಾಸಗಳಿಂದ ಬೆಳವಣಿಗೆಯಲ್ಲಿ ಏರುಪೇರು ಉಂಟಾಗಿದ್ದು ಇಳುವರಿಯ ಮೇಲೆ ಪ್ರಭಾವ ಉಂಟಾಗಿದೆ ಎಂದು ತಿಳಿಸಿದರು.
ರೈತ ರಮೇಶ್, ಕೃಷಿ ಅಧಿಕಾರಿ ಜಯಶಂಕರ್, ಜಲಾನಯನ ವ್ಯವಸ್ಥಾಪಕ ಮಧುಸೂದನ್, ವಿಸ್ತರಣಾ ವ್ಯವಸ್ಥಾಪಕ ಚಂದ್ರಶೇಖರ್, ಗಣೇಶ್, ಶಿವಯ್ಯ, ಬಸವರಾಜು, ಮಹೇಶ್ ಕುಮಾರ್, ರೈತರಾದ ಶಿವ ಮಾದಯ್ಯ, ಶಿವಮಲ್ಲಪ್ಪ ಮತ್ತು ಇತರರು ಇದ್ದರು.