ಜಿಲ್ಲೆ

ರೈತನ ಅಭ್ಯುದಯಕ್ಕೆ ಪೂರಕ ಬಜೆಟ್, ಬೆಂಗಳೂರು ದಕ್ಷಿಣ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಾಯನಹಳ್ಳಿ ಮುನಿರಾಜು ಅಭಿಮತ

ಆನೇಕಲ್: ಈ ಬಾರಿಯ ಬಜೆಟ್ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರ ಹಿತ ಕಾಯುವ ಕೆಲಸ ಮಾಡಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಹಾಗೂ ಕೆಂಪೇಗೌಡ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ನಾಯನಹಳ್ಳಿ ಮುನಿರಾಜು ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ಕೇಂದ್ರದಲ್ಲಿ ಮೋದಿ ಅವರು ರೈತರ ಪರವಾಗಿ ಹಲವಾರು ಯೋಜನೆ ಜಾರಿಗೆ ತಂದಿದ್ದಾರೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡುವ ಮೂಲಕ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ದೂರಿದರು.

ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ನೂರಾರು ಕೋಟಿ ರೂಪಾಯಿ ಬಜೆಟ್ ಅನ್ನು ರೈತ ಪರ ಯೋಜನೆಗಳಿಗೆ ಮೀಸಲಿಟ್ಟಿದ್ದು, ಪ್ರತಿ ಪಕ್ಷದವರು ರೈತರ ಪರ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಜತೆ ಕೈಜೋಡಿಸಿ ಕೆಲಸ ಮಾಡಬೇಕು ಎಂದರು.

ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ರೈತರಿಗೆ ತಿಳಿ ಹೇಳುವ ಕೆಲಸವನ್ನು ಆನೇಕಲ್ ಮಂಡಲದ ರೈತ ಮೋರ್ಚಾ ಕಾರ್ಯಕಾರಿಣಿ ತಂಡ ಉತ್ತಮವಾಗಿ ಮಾಡುತ್ತಿದೆ. ರಾಜ್ಯದಲ್ಲಿ ಅತಿಹೆಚ್ಚು ಗ್ರೀನ್ ಹೌಸ್ ಬೆಳೆ ಬೆಳೆಯುವ ರೈತರಲ್ಲಿ ತಾಲೂಕಿನ ರೈತರು ಮುಂಚೂಣಿಯಲ್ಲಿದ್ದು, ಸೂಕ್ತ ಮಾರುಕಟ್ಟೆ ಕಲ್ಪಿಸುವ ಸಂಬಂಧ ಸಚಿವರ ಬಳಿ ಮನವಿ ಮಾಡಲಾಗುವುದು ಎಂದರು.

ಆನೇಕಲ್ ಮಂಡಲದ ರೈತ ಮೋರ್ಚಾ ಅಧ್ಯಕ್ಷ ತಿಮ್ಮರಾಜು ಮಾತನಾಡಿ, ಕರೊನಾದಂತಹ ಸಂಕಷ್ಟದಲ್ಲೂ ಸರ್ಕಾರ ರೈತರ ಏಳಿಗೆಗಾಗಿ ಅತಿಹೆಚ್ಚಿನ ಅನುದಾನ ಮೀಸಲಿಟ್ಟಿದ್ದು, ಯಡಿಯೂರಪ್ಪ ಸರ್ಕಾರ ರೈತರ ಪರ ಎನ್ನುವುದನ್ನ ಮತ್ತೊಮ್ಮೆ ಸಾಬೀತು ಮಾಡಿದೆ ಎಂದರು.

ಆನೇಕಲ್ ತಾಲೂಕಿನಲ್ಲಿ ಹಲವು ಕೆರೆಗಳು ಬರಿದಾಗಿದ್ದು, ಅದನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕಿದೆ. ಕೆಲ ಕೆರೆಗಳಿಗೆ ಎಸ್ಟಿಪಿ ಪ್ಲಾಂಟ್‌ಗಳಿಂದ ಶುದ್ಧೀಕರಣ ಕಲುಷಿತ ನೀರನ್ನು ನೇರವಾಗಿ ಬಿಡಲಾಗುತ್ತಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಬೇಕು ಎಂದರು.

ಸರ್ಕಾರದ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿತು. ರೈತರ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಆನೇಕಲ್ ಮಂಡಲದ ರೈತ ಮೋರ್ಚಾ ಅಧ್ಯಕ್ಷ ಎಚ್.ಎಂ.ತಿಮ್ಮರಾಜುಗೌಡ, ಆನೇಕಲ್ ಮಂಡಲ ರೈತ ಮೋರ್ಚಾ ಉಪಾಧ್ಯಕ್ಷರಾದ ರಾಮಚಂದ್ರರೆಡ್ಡಿ, ಶಶಿಧರ್, ಶ್ರೀನಿವಾಸ್ ಗೌಡ, ಮುನಿರಾಜುರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಧರ್ ರೆಡ್ಡಿ, ನಾಗೇಶ್ ಇತರರು ಇದ್ದರು.