ಹುಬ್ಬಳ್ಳಿ: ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರ ಹಿಂದೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಚಿತಾವಣೆ ಇದೆ. ಅಲ್ಲದೇ ಇದು ರೈತರ ಹೋರಾಟವಲ್ಲ, ಇದೊಂದು ಬೋಗಸ್ ಹೋರಾಟ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದರು.
ಇಲ್ಲಿನ ಗೋಪನಕೊಪ್ಪದ ಗವಿಸಿದ್ಧೇಶ್ವರ ಕಾಲನಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ರೈತ ದಿವಸ್ ಹಾಗೂ ಅಟಲ್ಜೀ ಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಪಿಎಂಸಿ ಕಾಯ್ದೆಯಿಂದ ಬಹಳಷ್ಟು ಅನುಕೂಲವಿದೆ. ರೈತರಿಗೆ ಎಪಿಎಂಸಿಯಲ್ಲಿ ನಿಗದಿತ ಬೆಲೆ ದೊರೆಯದೇ ಹೋದರೆ ಹೊರಗಡೆ ಮಾರಾಟ ಮಾಡಬಹುದು. ರೈತರ ಮನೆ ಬಾಗಿಲಿಗೆ ಬಂದು ವ್ಯಾಪಾರಸ್ಥರು ಖರೀದಿ ಮಾಡುವಂತೆ ತಿದ್ದುಪಡಿ ತರಲಾಗಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮುಂದುವರಿಯಲಿದೆ. ಆದರೆ ಎಂಎಸ್ಪಿ ರದ್ದಾಗಲಿದೆ ಎಂದು ಕೆಲವರು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಇವುಗಳಿಗೆಲ್ಲ ರೈತರು ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ ಕಾರ್ಯಕ್ರಮವನ್ನು ಎಲ್ಇಡಿ ಪರದೆ ಮೇಲೆ ವೀಕ್ಷಿಸಲು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಈಶ್ವರಗೌಡ ಪಾಟೀಲ ಅವರ ಮನೆ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಉಣಕಲ್, ಗೋಪನಕೊಪ್ಪ ಗ್ರಾಮದ ರೈತರೊಂದಿಗೆ ಶೆಟ್ಟರ್, ಸಂವಾದ ನಡೆಸಿದರು. ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು.
ಎಂಎಲ್ಸಿ ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಪ್ರಮುಖರಾದ ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ, ಸಿದ್ದು ಮೊಗಲಿಶೆಟ್ಟರ್, ವಿರೂಪಾಕ್ಷ ರಾಯನಗೌಡರ, ರೂಪಾ ಶೆಟ್ಟಿ, ಅನ್ನಪೂರ್ಣಾ ಪಾಟೀಲ, ಇತರರು ಇದ್ದರು.
ಲೋಕಾರ್ಪಣೆ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿರುವ ಗೋಪನಕೊಪ್ಪ ಕರೆಮ್ಮದೇವಿ ದೇವಸ್ಥಾನದ ಸಮುದಾಯ ಭವನ ಹಾಗೂ ಸಚ್ಛ ಭಾರತ ಮಿಷನ್ ಅಡಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿರುವ ಸಾರ್ವಜನಿಕ ಶೌಚಗೃಹವನ್ನು ಸಚಿವ ಜಗದೀಶ ಶೆಟ್ಟರ್ ಲೋಕಾರ್ಪಣೆ ಮಾಡಿದರು.