ತುಮಕೂರು : ನನ್ನ ಅಧಿಕಾರವಧಿಯಲ್ಲಿ ಭೂಮಾಪಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ರೈತ ಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಇಲಾಖೆ ನಿವೃತ್ತ ನಿರ್ದೇಶಕ ಟಿ.ತಿಮ್ಮೇಗೌಡ ಹೇಳಿದರು.
ನಗರದ ಬಾಲಭವನದಲ್ಲಿ ಭಾನುವಾರ ಬೆಳಗುಂಬ ಸರ್ವೇ ಕ್ಯಾಂಪ್1996 ಬ್ಯಾಚ್‌ನ ಬೆಳ್ಳಿ ಮಹೋತ್ಸವ ಅಂಗವಾಗಿ ಕನ್ನಡ ರಾಜ್ಯೋತ್ಸವ ಹಾಗೂ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ನಿವೃತ್ತ ನಿರ್ದೇಶಕ ಟಿ.ತಿಮ್ಮೇಗೌಡ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರೈತರ ಕಷ್ಟ ಸುಖ ವಿಚಾರಿಸಿ ಅವರ ಸೇವೆ ಮಾಡುವಂತಹ ಕೆಲಸ ಎಲ್ಲರಿಗೂ ಸಿಗುವುದಿಲ್ಲ, ಅಂತಹ ಕೆಲಸ ನನಗೆ ಸಿಕ್ಕಿದ್ದು ಬಹಳ ಖುಷಿ ಎನಿಸಿತು. ಬಹಳಷ್ಟು ಸುಧಾರಣೆ ತಂದು ಇಲಾಖೆಗೆ ಮಹತ್ವ ಬರುವಂತೆ ಮಾಡಿದ ತೃಪ್ತಿಯಿದೆ ಎಂದರು.
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ನಿರ್ದೇಶಕನಾಗಿದ್ದ 1996ರಲ್ಲಿ ಭೂಮಾಪಕರ ಹುದ್ದೆಗೆ 1194 ನಿರುದ್ಯೋಗಿಗಳನ್ನು ಯಾವ ಪ್ರಭಾವಕ್ಕೂ ಮಣಿಯದೇ ಆಯ್ಕೆ ಮಾಡಲಾಗಿತ್ತು. ರಾಜ್ಯಕ್ಕೆ ಹಾಗೂ ಇಲಾಖೆಗೆ ಮಾದರಿಯಾಗಬೇಕೆಂಬ ನಿಟ್ಟಿನಲ್ಲಿ ಭೂಮಾಪಕರನ್ನು ಒಂದೇ ಬಾರಿಗೆ ಅರ್ಹತೆ ಆಧಾರದ ಮೇಲೆ ಪಾರದರ್ಶಕವಾಗಿ ಆಯ್ಕೆ ಮಾಡಿದ್ದೆ. 25 ವರ್ಷಗಳ ನಂತರ ಸ್ವಯಂ ಪ್ರೇರಿತರಾಗಿ ಸನ್ಮಾನ ಮಾಡುತ್ತಿರುವುದು ಅವರ ಪ್ರೀತಿ ವಿಶ್ವಾಸ ದೊಡ್ಡದು. ಯಾವುದೇ ಸನ್ಮಾನ ನಿರೀಕ್ಷೆ ಮಾಡಿರಲಿಲ್ಲ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ನಿರುದ್ಯೋಗಿಗಳಾಗಿದ್ದವರಿಗೆ ಉದ್ಯೋಗ ಸಿಗುವಂತೆ ನನ್ನ ಕರ್ತವ್ಯ ಮಾಡಿದ್ದೇನೆ ಎಂದು ತಿಳಿಸಿದರು.
1996ರಲ್ಲಿ ಬಿ.ಇ., ಎಂ.ಎ., ಆಗಿ ನಿರುದ್ಯೋಗಿಗಳಾಗಿದ್ದಂತಹವರೂ ಭೂಮಾಪಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದು ಪ್ರಾಮಾಣಿಕವಾಗಿ ರೈತರ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಭೂಮಾಪನ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಮುದ್ದುರಂಗಪ್ಪ ಹೇಳಿದರು.
ಮೆರವಣಿಗೆ: ನಗರದ ಎಂಜಿ ರಸ್ತೆಯಿಂದ ಬಾಲಭವನದವರೆಗೂ ಟಿ.ತಿಮ್ಮೇಗೌಡರನ್ನು ವಿವಿಧ ಮಂಗಳವಾದ್ಯಗಳೊಂದಿಗೆ ವೇದಿಕೆಗೆ ಕರೆತರಲಾಯಿತು. ಮಾನಸಾ, ಕುಸುಮಾ ಹಾಗೂ ವರ್ಷಿತಾ ಅವರಿಂದ ನೃತ್ಯ ರೂಪ ಪ್ರಸಾರವಾಯಿತು.
ಲಂಚ ಕೊಟ್ಟು ಬಂದವರು ಲಂಚ ಪಡೆದೆ ಕೆಲಸ ಮಾಡುತ್ತಾರೆ, ಆದರೆ, ನನ್ನ ಅವಧಿಯಲ್ಲಿ ಒಂದು ರೂಪಾಯಿ ಕೂಡ ಲಂಚ ಕೊಡದೆ ಆಯ್ಕೆಯಾದ ಭೂಮಾಪಕರು ರೈತರಿಗೆ ಪ್ರಾಮಾಣಿಕ ಸೇವೆ ನೀಡಬೇಕು. ಯಾವುದೇ ಆರೋಪಗಳು ಬರದಂತೆ ನಿಮ್ಮ ಆತ್ಮಪೂರ್ವಕವಾಗಿ ಪ್ರಾಮಾಣಿಕವಾಗಿ ಜನಸೇವೆ ಮಾಡಿ, ಜನಸೇವೆ ಮಾಡುವಂತಹ ಅವಕಾಶ ನಿಮಗೆಲ್ಲಾ ಆ ದೇವರು ಕೊಟ್ಟಿದ್ದಾನೆ. ಟಿ.ತಿಮ್ಮೇಗೌಡ ನಿವೃತ್ತ ಐಎಎಸ್ ಅಧಿಕಾರಿ