ಕಲಬುರಗಿ: ಭಕ್ತರು ಸಮೃದ್ಧಿ ಜೀವನ ನಡೆಸಲಿ, ಗಡಿಯಲ್ಲಿರುವ ಸೈನಿಕ ಹಾಗೂ ನಾಡಲ್ಲಿರುವ ರೈತನಿಗೆ ಸುಖ- ಶಾಂತಿ ದೊರೆಯಲೆಂದು ಸಿದ್ಧರಾಮೇಶ್ವರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ಮುಗಳಖೋಡ, ಜಿಡಗಾ ಮಠದ ಪೀಠಾಧಿಪತಿ ಶ್ರೀ ಡಾ. ಮುರುಘರಾಜೇಂದ್ರ ಸ್ವಾಮಿಗಳು ತಿಳಿಸಿದರು.
ಆಳಂದ ತಾಲೂಕಿನ ನವಕಲ್ಯಾಣ ಜಿಡಗಾದಲ್ಲಿ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಬುಧವಾರ ಶ್ರೀಗಳ ಜಾಗೃತ ಗದ್ದುಗೆಗೆ ವಿಶೇಷ ಪೂಜೆ, ಮಹಾ ರುದ್ರಾಭಿಷೇಕ ನಡೆಸಿ ಆಶೀರ್ವಚನ ನೀಡಿದ ಶ್ರೀಗಳು, ಸಿದ್ಧರಾಮ ಶ್ರೀಗಳ 17ನೇ ವರ್ಷದ ಪುಣ್ಯಸ್ಮರಣೆ ವಿಶೇಷತೆಯಿಂದ ಕೂಡಿದೆ. ಸಹಸ್ರಾರು ಭಕ್ತರು ತಲೆಯ ಮೇಲೆ ರೊಟ್ಟಿ ಬುಟ್ಟಿಗಳನ್ನು ಇಟ್ಟುಕೊಂಡು ಶ್ರೀಮಠದತ್ತ ಹೆಜ್ಜೆ ಹಾಕುವುದನ್ನು ನೋಡುವುದೇ ಒಂದು ಪುಣ್ಯ. ಜಿಡಗಾಕ್ಕೆ ನವ ಕಳೆ ಬಂದಿದೆ ಎಂದರು.
ಪೂಜ್ಯರ ಪವಾಡ ಹಾಗೂ ಭಕ್ತರ ಸಹಕಾರದಿಂದ ಶ್ರೀಮಠ ಅಭಿವೃದ್ಧಿ ಹೊಂದಿದ್ದು, ಜಾತೀಯತೆಯನ್ನು ಮೀರಿದ ಮಠವಾಗಿ ಬೆಳೆದಿದೆ. ವಿವಿಧ ಭಾಗಗಳಿಂದ ಸಾಕಷ್ಟು ಭಕ್ತರು ಜಿಡಗಾಕ್ಕೆ ಆಗಮಿಸಿ ಶ್ರೀಗಳ ಗದ್ದುಗೆ ದರ್ಶನ ಪಡೆಯುತ್ತಿದ್ದಾರೆ. ದೇಶ ಸಮೃದ್ಧಿಯಾಗಿವುರುವುದರ ಜತೆಗೆ ಎಲ್ಲರೂ ಸುಖಿ ಜೀವನ ನಡೆಸಬೇಕು ಎಂದು ಹೇಳಿದರು.
ನಂತರ ಗದ್ದುಗೆ ಬಳಿ ಓಂಕಾರ ಭಜನೆ ನೆರವೇರಿತು. ಸಂಜೆ ಭಕ್ತರಿಂದ ಶ್ರೀಗಳಿಗೆ ತುಲಾಭಾರ ಜರುಗಿತು.
ಶಾಸಕರಾದ ಡಾ. ಅಜಯಸಿಂಗ್, ಬಸವರಾಜ ಮತ್ತಿಮೂಡ, ಪ್ರಮುಖರಾದ ಪ್ರಭಾವತಿ ಸಿಂಗ್, ಗಿರೀಶ ಪಾಟೀಲ್ ಇತರರಿದ್ದರು.