ಜಿಲ್ಲೆ

ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ, ಬೇಸಾಯ ಪರಿಕರ ಲಭ್ಯ

ನಾಪೋಕ್ಲು: ಬಿತ್ತನೆ ಬೀಜ, ಕೃಷಿ ಪರಿಕರ, ಯಂತ್ರೋಪಕರಣಗಳು ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪರಮೇಶ್ ಸಲಹೆ ನೀಡಿದರು.

ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಳುಮೆ ಯಂತ್ರ, ಕಟಾವು ಯಂತ್ರ, ಟಾರ್ಪಾಲಿನ್ ಸೇರಿದಂತೆ ವಿವಿಧ ಕೃಷಿ ಪರಿಕರಗಳು ರೈತ ಕೇಂದ್ರದಲ್ಲಿ ಲಭ್ಯವಿದ್ದು ಆಸಕ್ತ ರೈತರು ಅರ್ಜಿ ಸಲ್ಲಿಸಿ ಅವುಗಳನ್ನು ಪಡೆದುಕೊಳ್ಳಬಹುದಾಗಿದೆ. ಕೃಷಿ ಪರಿಕರಗಳು ಸಾಮಾನ್ಯ ರೈತರಿಗೆ ಶೇಕಡ 50 ದರದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇಕಡ 90 ದರದಲ್ಲಿ ಲಭ್ಯವಿದೆ. ಭತ್ತದ ಬಿತ್ತನೆ ಬೀಜವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 937.50 ರೂ.ಗಳಿಗೆ ವಿತರಿಸಲಾಗುವುದು ಎಂದರು.

ಹಿಂದೆ ಸಾವಯವ ಗೊಬ್ಬರ ಹೆಚ್ಚು ಬಳಕೆಯಾಗುತ್ತಿತ್ತು. ಈಗ ಕೃಷಿಗೆ ಮಹತ್ವ ಹೆಚ್ಚಿದ್ದು ಲಘು ಪೋಷಕಾಂಶಗಳನ್ನು ಒದಗಿಸುವ ಅಗತ್ಯವಿದೆ. ಸಕಾಲದಲ್ಲಿ ಅವುಗಳನ್ನು ಬಳಕೆ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಡಾ.ಮೋಹನ್‌ಕುಮಾರ್ ಮಾತನಾಡಿ, ರೈತರು ಉತ್ತಮ ಇಳುವರಿ ಪಡೆಯಲು 17 ಸಸ್ಯ ಪೋಷಕಾಂಶಗಳು ಬೇಕಿವೆ. ರಸಗೊಬ್ಬರ, ಸಸ್ಯ ಪೋಷಕಾಂಶಗಳನ್ನು ಸಕಾಲದಲ್ಲಿ ಪೂರೈಸುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಸಾರಜನಕ, ರಂಜಕ ಪೊಟ್ಯಾಷ್ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ರೈತರು ಸಸ್ಯಗಳಿಗೆ ಒದಗಿಸಬೇಕು. ಮಣ್ಣಿನ ಸಾರವನ್ನು ಕಾಪಾಡಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜದ ಬಳಕೆ ಮಾಡಬೇಕು ಎಂದರು.

ಪಶುವೈದ್ಯಾಧಿಕಾರಿ ಡಾ.ಶಿಲ್ಪಾ ಅವರು ಇಲಾಖೆಯಲ್ಲಿ ಲಭ್ಯವಿರುವ ಕಾಲು ಬಾಯಿ ರೋಗ ಹಾಗೂ ಹಂದಿಜ್ವರ ವಿರುದ್ಧ ಪ್ರಾಣಿಗಳಿಗೆ ಸಕಾಲದಲ್ಲಿ ಲಸಿಕೆ ಹಾಕುವುದು ಇತರ ಸೇವೆಗಳ ಬಗ್ಗೆ ಮಾತನಾಡಿದರು.

ಕೃಷಿ ವಿಜ್ಞಾನಿ ಡಾ.ಬಸವಲಿಂಗಯ್ಯ ಅವರು ಬತ್ತದ ಬೀಜ ಆಯ್ಕೆ, ಸಂಸ್ಕರಣೆಯ ಮಹತ್ವವನ್ನು ಹಾಗೂ ಇನ್ನಿತರ ವಿಷಯಗಳನ್ನು ರೈತರಿಗೆ ಮನಮುಟ್ಟುವಂತೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಕಾರ್ಯಕ್ರಮ ಉದ್ಘಾಟಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು.

ದವಸ, ಧಾನ್ಯ, ಹಣ್ಣು ಹಂಪಲು ಗಿಡಗಳ ಪ್ರದರ್ಶನದ ಮೂಲಕ ರೈತರಿಗೆ ಕೃಷಿ ಪೂರಕ ಮಾಹಿತಿಗಳನ್ನು ನೀಡಲಾಯಿತು. ಅಭಿಯಾನದಲ್ಲಿ ಪಾಲ್ಗೊಂಡಿದ್ದ ರೈತರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಾಪೋಕ್ಲು ಹೋಬಳಿಯ 78 ರೈತರು ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.