ಜಿಲ್ಲೆ

ರೈತ ಸಂಘದಿಂದ ಪ್ರತಿಭಟನೆ

ಕೊಳ್ಳೇಗಾಲ: ಕಾಲುವೆಗಳಲ್ಲಿ ಹೂಳು ಹಾಗೂ ಗಿಡ-ಗಂಟಿ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಲು ಜಮಾಯಿಸಿದ್ದ ಪ್ರತಿಭಟನಾಕಾರಿಗೆ ಸೂಕ್ತ ಬಂದೋಬಸ್ತ್ ನೀಡದ ಕಾರಣ ಅಸಮಾಧನಗೊಂಡ ರೈತರು ಪ್ರವಾಸಿ ಮಂದಿರದ ವೃತ್ತದ ಬಳಿ ಪ್ರತಿಭಟಿಸಿದರು. ಬಳಿಕ ಕಬಿನಿ ಕಚೇರಿಯತ್ತ ಹೊರಟು ಧರಣಿ ನಡೆಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಗೌಡಳ್ಳಿ ಸೋಮಣ್ಣ ಮಾತನಾಡಿ, ಕಬಿನಿ ನಾಲೆಗಳಲ್ಲಿ ಹೂಳು ತುಂಬಿಕೊಂಡಿದೆ. ಅಲ್ಲಲ್ಲಿ ಗಿಡ-ಗಂಟಿಗಳನ್ನು ತೆರವುಗೊಳಿಸದೆ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. 15 ವರ್ಷಗಳಿಂದ ಕೆಲವೆಡೆ ನಾಲೆಗಳ ಹೂಳು ತೆಗೆದಿಲ್ಲ. ಇದರಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ಗುತ್ತಿಗೆದಾರರ ಪರವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಕಾಲುವೆಗಳಿಗೆ ನೀರನ್ನು ಕಾಟಾಚಾರಕ್ಕೆ ಬಿಡಲಾಗುತ್ತಿದೆ. ಸಕಾಲಕ್ಕೆ ನೀರು ಹರಿಸುತ್ತಿಲ್ಲ ಎಂದು ದೂರಿದರು.

ಸ್ಥಳಕ್ಕಾಗಮಿಸಿದ ಕಬಿನಿ ಪ್ರಭಾರ ಇಇ ಈರಣ್ಣ ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ಕಾಲುವೆಗಳಲ್ಲಿ ಹೂಳು ಹಾಗೂ ಜಂಗಲ್ ತೆರವುಗೊಳಿಸಲು ಈಗಾಗಲೇ ಅನುದಾನ ದೊರೆತಿದೆ. ಕಾಲುವೆ ಸ್ವಚ್ಛತಾ ಕಾಮಗಾರಿ ಆರಂಭವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಸಮಸ್ಯೆ ಸರಿಪಡಿಸುವಂತೆ ಸೂಚನೆ ನೀಡುತ್ತೇನೆ ಎಂದರು. ಬಳಿಕ ಪ್ರತಿಭಟನೆ ಕೈಬಿಟ್ಟರು.

ಜಿಲ್ಲಾ ಕಾರ್ಯದರ್ಶಿ ಬಸವರಾಜು ಕಾಮಗೆರೆ, ಹನೂರು ತಾಲೂಕು ಅಧ್ಯಕ್ಷ ಚಿಕ್ಕರಾಜು, ಉಪಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಗೌರವಾಧ್ಯಕ್ಷ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಭುಸ್ವಾಮಿ, ಸಂಘಟನಾ ಕಾರ್ಯದರ್ಶಿ ಶಾಂತಮೂರ್ತಿ, ಪವನ್, ಮುಖಂಡರಾದ ದಶರಥ, ರಾಮಕೃಷ್ಣ ಮತ್ತಿತರಿದ್ದರು.