ಮದ್ದೂರು: ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು.
ರೈತ ಸಂಘದ ಜಿಲ್ಲಾ ಮುಖಂಡ ಸೊ.ಸಿ.ಪ್ರಕಾಶ್ ಮಾತನಾಡಿ, ಈ ಬಾರಿ ಮುಂಗಾರು ಬೆಳೆಗೆ ಭತ್ತದ ನಾಟಿ ಮಾಡಲು ಈಗಾಗಲೇ ಸಾಕಷ್ಟು ಹಿನ್ನಡೆಯಾಗಿದೆ. ಮಳೆ ಇಲ್ಲದ ಪರಿಣಾಮ ನಾಲೆಗಳಲ್ಲಿ ನೀರು ಇಲ್ಲದೆ ತೊಂದರೆಯಾಗಿದೆ. ಆದ್ದರಿಂದ, ಕಟ್ಟು ಪದ್ಧತಿಯಲ್ಲಿ ಕೃಷ್ಣರಾಜಸಾಗರ ಅಣೆಕಟ್ಟಿನಿಂದ ನೀರು ಬಿಡಲು ಕೂಡಲೇ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಕೆ.ಆರ್.ಎಸ್.ನಲ್ಲಿ 113 ಅಡಿ ನೀರಿದ್ದು ಈ ಬಾರಿ ಮುಂಗಾರಿಗೆ ಯಾವುದೇ ತೊಂದರೆ ಆಗುವುದಿಲ್ಲ. ನಾಲೆಗಳ ಮೂಲಕ ನೀರು ಹರಿಸಿದರೆ ಜನ ಜಾನುವಾರುಗಳಿಗೆ, ರೈತರಿಗೆ ಅನುಕೂಲವಾಗಲಿದೆ. ಮುಂಗಾರು ಬಿತ್ತನೆ ಭತ್ತ ಉಚಿತವಾಗಿ ಕೊಟ್ಟು ರೈತರಿಗೆ ಸಹಕರಿಸಬೇಕು. ಒಣಗಿದ ಬೆಳೆಗಳಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಬಳಿಕ ಪಟ್ಟಣದ ಕಾವೇರಿ ನೀರಾವರಿ ನಿಗಮಕ್ಕೆ ಆಗಮಿಸಿದ ಪ್ರತಿಭಟನಾಕಾರರು ಕಾವೇರಿ ನೀರಾವರಿ ನಿಗಮಕ್ಕೆ ಮುತ್ತಿಗೆ ಹಾಕಿ ಸಂಬಂಧಪಟ್ಟವರಿಗೆ ರೈತರ ಅಹವಾಲನ್ನು ತಲುಪಿಸಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ನೀರಾವರಿ ನಿಗಮದ ಕಿರಿಯ ಇಂಜಿನಿಯರ್ ಶಿವಕುಮಾರ್ ನಾಯಕ್ ಮಾತನಾಡಿ, ಇಂದು (ಸೋಮವಾರ)ಕೆಆರ್‌ಎಸ್‌ನಲ್ಲಿ ಸಭೆ ಇರುವುದರಿಂದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ. ನಿಮ್ಮ ಅಹವಾಲನ್ನು ಅವರಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಟ್ಟರು.
ಮಹೇಂದ್ರ, ಪ್ರಭುಲಿಂಗ, ವೆಂಕಟೇಶ್, ನಾಗರಾಜು, ಸೀತಾರಾಮು, ಚನ್ನೇಗೌಡ, ರವಿಕುಮಾರ್ ಇತರರು ಭಾಗವಹಿಸಿದ್ದರು.