ಕೊಳ್ಳೇಗಾಲ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ಕಾರ್ಯಕರ್ತರು ಶನಿವಾರ ಸಂಜೆ ಮೊಂಬತ್ತಿ ಹಿಡಿದು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟಿಸಿದರು.
ಬಳಿಕ ಮೊಂಬತ್ತಿ ಹಿಡಿದು ಡಾ.ಅಂಬೇಡ್ಕರ್ ವೃತ್ತದವರೆಗೆ ಸಾಗಿ ಪ್ರತಿಭಟಿಸಿದರು. ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಮಾದೇಶ್ ಮಾತನಾಡಿ, ಬೆಳೆಗಳಿಗೆ ಕನಿಷ್ಠ ಬೆಂಬಲ, ರೈತರಿಗೆ ಪಿಂಚಣಿ ಮತ್ತು ಕೃಷಿ ಸಾಲಮನ್ನಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ರೈತರ ಬೇಡಿಕೆಯನ್ನು ಈಡೇರಿಸಬೇಕೆಂದು ಹೇಳಿದರು.
ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ವಿನಾಯತ್, ಖಜಾಂಚಿ ಮಾದೇಶ್, ಕಾರ್ಯ ದರ್ಶಿ ವೆಂಕಟೇಶ್, ಶಿವು, ಕಿರಣ್, ಬಸವಶೆಟ್ಟಿ, ಬಲರಾಮ, ಸಿದ್ದರಾಜು, ಆಲಮನೆ ರಾಜಣ್ಣ, ಶ್ರೀಕಂಠ, ಮಾದೇಶ, ರಾಚಪ್ಪಾಜಿ, ಹರೀಶ್, ನಾಗರಾಜು, ಚಂದನ್ ಇತರರಿದ್ದರು.