ಹಾವೇರಿ: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಹಾಗೂ ಗಣ್ಯರಾಜ್ಯೋತ್ಸವ ದಿನದಂದು ಕೈಗೊಂಡಿರುವ ರ್ಯಾಲಿಗೆ ಬೆಂಬಲಾರ್ಥವಾಗಿ ನಗರದಲ್ಲಿ ವಿವಿಧ ರೈತ ಸಂಘಟನೆಗಳು ಜ. 26ರಂದು ಹೋರಾಟ ಹಮ್ಮಿಕೊಂಡಿವೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಹಾಗೂ ಬೆಂಗಳೂರಿನಲ್ಲಿ ರೈತರು ಹೋರಾಟ ನಡೆಸಿದ್ದು, ಜಿಲ್ಲೆಯಿಂದಲೂ ಟ್ರ್ಯಾಕ್ಟರ್ ಮೂಲಕ ರೈತರು ಬೆಂಗಳೂರಿಗೆ ಈಗಾಗಲೇ ತೆರಳಿದ್ದಾರೆ. ಅಲ್ಲದೆ, ನಗರದ ಸಿದ್ದಪ್ಪ ವೃತ್ತದಲ್ಲೂ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಹಿಂಡೆಯುವ ಮೂಲಕ ಕೇಂದ್ರ ಸರ್ಕಾರ ರೈತರ ಹಿತ ಕಾಪಾಡಬೇಕು. ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಈ ಹೋರಾಟದಲ್ಲಿ ಸುಮಾರು 138 ರೈತರು ಹುತಾತ್ಮರಾಗಿದ್ದಾರೆ. ಸರ್ಕಾರ ನಾಮಕಾವಸ್ಥೆ ಎಂಬಂತೆ ರೈತರೊಂದಿಗೆ ರ್ಚಚಿಸುತ್ತಿದ್ದು, ಯಾವ ಮಾತುಕತೆಗಳು ಫಲಪ್ರದವಾಗಿಲ್ಲ. ಈ ಹಿನ್ನೆಲೆ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ನಗರದಲ್ಲಿ ನೂರಾರು ಟ್ರ್ಯಾಕ್ಟರ್ಗಳೊಂದಿಗೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ರೈತ ಸಂಘ, ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಜತೆಗೆ ಚರ್ಚೆಗೆ ಬಾರದ ರೈತರು: ನಗರದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಲು ಜಿಲ್ಲಾಧಿಕಾರಿ ಸೋಮವಾರ ಕರೆದಿದ್ದ ವಿವಿಧ ರೈತ ಸಂಘಟನೆಗಳ ಸಭೆಯನ್ನು ರೈತರು ಬಹಿಷ್ಕರಿಸಿ ಹೋರಾಟ ಖಚಿತ ಎಂಬ ಸಂದೇಶ ಸಾರಿದ್ದಾರೆ. ಸಭೆಗೆ ಆಗಮಿಸಿದ್ದ ಕೆಲ ರೈತರೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಿದ್ದು, ಶಾಂತಿಯುತ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದ್ದಾರೆ. ರೈತರೊಂದಿಗೆ ನಗರದ ಜಿಪಂ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಮಾತನಾಡಿ, ಜಿಲ್ಲೆಯ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಬೆಳೆ ಪರಿಹಾರಕ್ಕೆ ರೈತರ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ. ಈ ವರ್ಷದ ಬೆಳೆ ಪರಿಹಾರ ಹಣ ಬಿಡುಗಡೆಯಾಗಿಲ್ಲ. ಮುಂದಿನ ವಾರದಲ್ಲಿ ಹಣ ಬಿಡುಗಡೆಯಾಗಲಿದೆ. ಬೆಳೆ ಪರಿಹಾರ ವಿತರಣೆಯಲ್ಲಿ ಆದ ವ್ಯವಹಾರದ ಕುರಿತು ತನಿಖೆ ಪ್ರಗತಿಯಲ್ಲಿದೆ. ಗ್ರಾಪಂ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕ್ರಮ ಮಾಡಲಾಗಿಲ್ಲ. ಫೆ. 4ರಂದು ಜಿಪಂ ಸಭಾಂಗಣದಲ್ಲಿ ರೈತ ಸಂಘಟನೆಗಳ ಸಭೆ ಆಯೋಜಿಸಲಾಗುವುದು. ಜಿಲ್ಲೆಯ ವಿವಿಧ ರೈತ ಸಂಘಟನೆಗಳು ರೈತರ ಸಮಸ್ಯೆಗಳು ಕುರಿತು ಪಟ್ಟಿ ಮಾಡಿ ನೀಡಿದಲ್ಲಿ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನಮಾಡಲಾಗುವುದು ಎಂದು ಭರವಸೆ ನೀಡಿದರು. ಎಸ್ಪಿ ಕೆ.ಜಿ. ದೇವರಾಜ ಮಾತನಾಡಿ, ಜಿಲ್ಲೆಯಲ್ಲಿ 3 ಸಾವಿರ ರೈತರು ಹಾಗೂ 150 ಟ್ರ್ಯಾಕ್ಟರ್ಗಳ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಪ್ರತಿಭಟನೆ ಶಾಂತಯುತವಾಗಿ ನಡೆಸಲು ಮನವಿ ಮಾಡಲಾಗಿದೆ ಎಂದರು. ಸಭೆಯಲ್ಲಿ ಜಿಪಂ ಸಿಇಒ ಮಹಮ್ಮದ್ ರೋಷನ್, ಅಪರ ಜಿಲ್ಲಾಧಿಕಾರಿ ಎಸ್. ಯೋಗೀಶ್ವರ, ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸಿ ಡಾ. ದಿಲೀಪ್ ಶಶಿ, ಕೃಷಿ ಜಂಟಿ ನಿರ್ದೇಶಕ ಬಿ. ಮಂಜುನಾಥ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ರಾಜೀವ ಕೂಲೇರ ಇತರರಿದ್ದರು.</