ತುಮಕೂರು: ರೈತರಿಗೆ ನೀಡುವ ಸಾಲ ಕಡಿತ ಮಾಡಿರುವ ನಬಾರ್ಡ್ ಕ್ರಮ ಖಂಡಿಸಿ ಹಾಗೂ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಆಗ್ರಹಿಸಿ ಬೆಂಗಳೂರಿನ ಆರ್ಬಿಐ ಪ್ರಾದೇಶಿಕ ಕಚೇರಿ ಎದುರು ಜ.29ರಂದು ಬೆಳಗ್ಗೆ 11ಕ್ಕೆ ಹಮ್ಮಿಕೊಂಡಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ರೈತ ಮುಖಂಡರು ಹೆಬ್ಬೂರಿನಲ್ಲಿ ಸಭೆ ಸೇರಿ ಚರ್ಚಿಸಿದರು.
ತಾಲೂಕಿನ ಹೆಬ್ಬೂರು ಕೆ.ಎಸ್.ಪುಟ್ಟಣ್ಣಯ್ಯ ಭವನದಲ್ಲಿ ಭಾನುವಾರ ಬೆಂಗಳೂರು ವಿಭಾಗೀಯ ಮಟ್ಟದ ರೈತ ಮುಖಂಡರು ಸಭೆ ಸೇರಿ, ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ನಾವೆಲ್ಲರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎ.ಗೋವಿಂದರಾಜು ಮನವಿ ಮಾಡಿದ್ದಾರೆ.
ಕೃಷಿ ಕ್ಷೇತ್ರವನ್ನು ಸದೃಢಗೊಳಿಸುವ ದೃಷ್ಟಿಯಿಂದ ಆರ್ಥಿಕ ನೆರವು ನೀಡಲು ಸ್ಥಾಪನೆಯಾಗಿರುವ ನಬಾರ್ಡ್ ಮೂಲಕ ಕೃಷಿಗೆ ನೀಡುತ್ತಿದ್ದ ಅಲ್ಪಾವಧಿ ಸಾಲದ ಮೊತ್ತವನ್ನು ಕಡಿತಗೊಳಿಸಲಾಗಿದೆ. ಇದರಿಂದ ರೈತರ ಮೇಲೆ ಹೊಡೆತ ಬೀಳಲಿದೆ. ಕೃಷಿ ವಲಯಕ್ಕೂ ಹಿನ್ನೆಡೆಯಾಗಲಿದೆ. ಹಾಗಾಗಿ ರಾಜ್ಯದ ಎಲ್ಲ ವಿಭಾಗೀಯ ಮಟ್ಟದ ಸಭೆ ನಡೆಸಲಾಗುತ್ತಿದೆ ಎಂದರು. ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ,ತುಮಕೂರು ಜಿಲ್ಲೆಯ ರೈತ ಮುಖಂಡರು ಆಗಮಿಸಿದ್ದೀರಿ, ಬೆಂಗಳೂರಿಗೆ ಹತ್ತಿರದಲ್ಲಿರುವ ಜಿಲ್ಲೆಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಬಹಳ ದೊಡ್ಡ ಮಟ್ಟದ ಹೋರಾಟವನ್ನು ರೂಪಿಸುವ ನಿಟ್ಟಿನಲ್ಲಿ ನಿವೆಲ್ಲರೂ ಕೈಜೋಡಿಸಬೇಲಕು ಎಂದರು.
ಕೇಂದ್ರ ಸರ್ಕಾರ ಕಳೆದ 3 ವರ್ಷಗಳಿಂದಲೂ ಕೃಷಿ ಕ್ಷೇತ್ರಕ್ಕೆ ನೀಡುವ ಸಾಲದ ಮೊತ್ತ ಕಡಿಮೆ ಮಾಡುತ್ತಲೇ ಬರುತ್ತಿದೆ. ಕೇಂದ್ರದ ಈ ನೀತಿಯಿಂದಾಗಿ ನಬಾರ್ಡ್ ರೈತರಿಗೆ ನೀಡುತ್ತಿದ್ದ ಸಾಲದ ಮೊತ್ತವನ್ನು ಕಡಿಮೆ ಮಾಡಿ, ಈ ಸಾಲಿನಲ್ಲಿ ಕರ್ನಾಟಕಕ್ಕೆ ನೀಡುತ್ತಿದ್ದ 5600 ಕೋಟಿಗೆ ಬದಲಾಗಿದೆ 2600 ಕೋಟಿ ನೀಡಿ, ಸಾಲವನ್ನು ಪ್ರಮಾಣವನ್ನು ಶೇ.58ರಷ್ಟು ತಗ್ಗಿಸಿದೆ .ಆ ಮೂಲಕ ನಾನು ರೈತರ ಪರವಾಗಿಲ್ಲ ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ರವಾನಿಸಿದೆ ಎಂದರು.
ಸಹಕಾರಿ ಸಂಸ್ಥೆಗಳಾದ ವಿಎಸ್ಎಸ್ಎನ್, ಡಿಸಿಸಿ ಬ್ಯಾಂಕ್, ಪಿಎಲ್.ಡಿ ಬ್ಯಾಂಕ್ಗಳು ನೀಡುತಿದ್ದು, ಕೃಷಿ ಸಾಲಗಳಿಗೆ ಮೂಲವೇ ನರ್ಬಾಡ್ನ ಸಾಲವಾಗಿದೆ. ಶೂನ್ಯ ಬಡ್ಡಿದರ, ಕಡಿಮೆ ಬಡ್ಡಿದರ ಸಾಲಕ್ಕೆ ಮೂಲವೇ ನಬಾರ್ಡ. ಕೇಂದ್ರದ ಈ ಧೋರಣೆಯಿಂದ ನಬಾರ್ಡ್ ಸ್ಥಾಪನೆಯ
ಹಿಂದಿನ ಉದ್ದೇಶವೇ ಮೂಲೆಗುಂಪಾಗಿದೆ ಎಂದರು.
ಕೃಷಿ ಸಾಲಕ್ಕಾಗಿ ವಾಣಿಜ್ಯ ಬ್ಯಾಂಕ್ಗಳಿಗೆ ಹೆಚ್ಚಿನ ಬಡ್ಡಿಗೆ ತರಬೇಕಾಗುತ್ತದೆ. ಇದು ಇಡೀ ಕೃಷಿ ವ್ಯವಸ್ಥೆಯನ್ನೇ ನಾಶ ಮಾಡಿ ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಾರ್ಪೊರೇಟ್ ಕಂಪನಿಗಳ ವಶಕ್ಕೆ ವಹಿಸಲು ಹುನ್ನಾರ ನಡೆಸಿದೆ. ರೈತರು ಎಚ್ಚೆತ್ತು ಕೊಳ್ಳದಿದ್ದರೆ, ಮುಂದೊಂದು ದಿನ ನಮ್ಮ ಹೊಲ, ಗದ್ದೆಗಳಲ್ಲಿ ನಾವೇ ಕೂಲಿಯಾಳಾಗಿ ದುಡಿಯುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.
ಸಭೆಯಲ್ಲಿ ರಾಮನಗರ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಚಂದ್ರಶೇಖರ್, ದೊಡ್ಡ ಬಾಳಯ್ಯ, ಗೋಪಾಲ್, ಕೋಲಾರ ಜಿಲ್ಲಾ ನಾರಾಯಣಸ್ವಾಮಿ, ಕೃಷ್ಣಪ್ಪ, ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ, ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ ಮತ್ತಿತರರು ಇದ್ದರು.
ಕಿರುಕುಳ ತಡೆಗಟ್ಟಿ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ಕಿರುಕುಳದಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಇತರ ದುಡಿಯುವ ಜನ ಸಂಕಷ್ಟಕ್ಕೀಡಾಗಿದ್ದಾರೆ. ಈ ಮೈಕ್ರೋ ಫೈನಾನ್ಸ್ ಮೇಲೆ ಯಾರಿಗೂ ಹಿಡಿತ ಇಲ್ಲದಂತಾಗಿ ಮಹಿಳೆಯರು ಮಾನ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಒಳಗಾಗಿದ್ದಾರೆ. ಕಿರುಕುಳ ತಾಳಲಾರದೇ ಊರನ್ನೇ ತೊರೆಯುತ್ತಿದ್ದಾರೆ. ಈ ಮೈಕ್ರೋ ಫೈನಾನ್ಸ್ಗಳ ಕಿರುಕುಳ ತಡೆಗಟ್ಟಲೇಬೇಕಾಗಿದೆ. ಹಾಗಾಗಿ ಈಗಾಗಲೇ ಸಿದ್ಧಗೊಂಡಿರುವ ಕರಪತ್ರಗಳನ್ನು ಹಂಚಿ, ರೈತರನ್ನು ಎಚ್ಚರಿಸಿ, ಪ್ರತಿಭಟನೆಗೆ ಬರುವಂತೆ ಮಾಡಬೇಕಿದೆ ಎಂದು ರೈತ ಸಂ ಕರೆ ನೀಡಿದೆ.