ಚಿತ್ರದುರ್ಗ: ರಾಜ್ಯ ಸರ್ಕಾರದ ರೈತ ವಿರೋಧಿ ನಡೆ ಖಂಡಿಸಿ ಬಿಜೆಪಿಯಿಂದ ರಾಜ್ಯಾದ್ಯಂತ ಸೆ. 8ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಂಎಲ್ಸಿ ಕೆ.ಎಸ್.ನವೀನ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಳೆ ಇಲ್ಲದೆ, ಬೆಳೆ ನಾಶವಾಗಿದ್ದು ಅನ್ನದಾತರು ಕಂಗಾಲಾಗಿದ್ದಾರೆ. ಅವರ ಸಮಸ್ಯೆ ಕಡೆಗಣಿಸಿ ದೆಹಲಿ ನಾಯಕರ ಮನವೊಲಿಸಲು ಸಿಎಂ, ಡಿಸಿಎಂ ಪೈಪೋಟಿಗೆ ಬಿದ್ದಿದ್ದಾರೆ. ಹೀಗಾಗಿ ನಿದ್ರಾವಸ್ಥೆಯಲ್ಲಿರುವ ಸರ್ಕಾರ ಎಚ್ಚರಿಸಲು ಪ್ರತಿಭಟನೆಗೆ ಸಜ್ಜಾಗಿದ್ದೇವೆ ಎಂದರು.
ರೈತರ ಗೋಳಾಟ, ಕಣ್ಣೀರು ಸರ್ಕಾರಕ್ಕೆ ಕಾಣುತ್ತಿಲ್ಲ. ರಾಜ್ಯದಲ್ಲಿ ಶೇ 99ರಷ್ಟು ಬೆಳೆಗಳು ನಾಶವಾಗಿದ್ದು, ಪರಿಶೀಲಿಸಲು ಕಂದಾಯ ಸಚಿವರಿಗೂ ಕಾಳಜಿ ಇಲ್ಲ. ಬರ ಘೋಷಿಸಲು ಹಿಂದೆ-ಮುಂದೆ ನೋಡುತ್ತಿದ್ದಾರೆ. ಜಲಾಶಯಗಳಲ್ಲಿ ನೀರಿಲ್ಲದಿದ್ದರೂ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸಿ ರೈತರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಾಲ ಮರುಪಾವತಿಸಲಾಗದೆ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಚಿವರೊಬ್ಬರು ಪರಿಹಾರದ ಆಸೆಗಾಗಿ ಈ ರೀತಿ ಮಾಡಿಕೊಂಡಿದ್ದಾರೆಂದು ಹಗುರವಾಗಿ ಮಾತನಾಡಿದ್ದಾರೆ. ರೈತರ ಪಂಪ್‌ಸೆಟ್‌ಗಳಿಗೆ ನಿತ್ಯ ನಾಲ್ಕೈದು ಗಂಟೆ ವಿದ್ಯುತ್ ಪೂರೈಸಲು ಸಾಧ್ಯವಾಗದ ರಾಜ್ಯ ಸರ್ಕಾರ ಲೋಡ್‌ಶೆಡ್ಡಿಂಗ್‌ಗೆ ಮುಂದಾಗಿದೆ. ಹೀಗಾಗಿ ರೈತರು ದುಸ್ಥಿತಿ ಎದುರಿಸುವಂತಾಗಿದೆ ಎಂದು ದೂರಿದರು.
ಭದ್ರಾ ಮೇಲ್ದಂಡೆ ಯೋಜನೆ ಒಂದಿಂಚು ಕಾಮಗಾರಿ ಆಗಿಲ್ಲ. ಕಿಸಾನ್ ಸಮ್ಮಾನ್, ವಿದ್ಯಾಸಿರಿ ಯೋಜನೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂದಕ್ಕೆ ಪಡೆದಿದ್ದಾರೆ. ಕ್ಷೀರ ಬ್ಯಾಂಕ್, ಜಿಲ್ಲೆಗೊಂದು ಗೋಶಾಲೆ ತೆರೆಯಲು ಆಗುತ್ತಿಲ್ಲ. ಗ್ಯಾರಂಟಿಗಳೊಂದಿಗೆ ನೂರು ದಿನಗಳ ಸಾಧನೆ ನೆಪವೊಡ್ಡಿ ರೈತ ವಿರೋಧಿ ನೀತಿ ಅನುಸರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್ ಇತರರಿದ್ದರು.