ಶಿರಸಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧ ನೀತಿ ಖಂಡಿಸಿ ಶುಕ್ರವಾರ ತಾಲೂಕಿನ ದಾಸನಕೊಪ್ಪದಲ್ಲಿ ಭೂಮಿ ಹಕ್ಕು ಹೋರಾಟಗಾರರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ನೇತೃತ್ವವಹಿಸಿದ್ದ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಮಾತನಾಡಿ, ದೇಶದ ಭದ್ರತೆಯು ರೈತನ ಭದ್ರತೆಯ ಮೇಲೆ ಅವಲಂಬಿತವಾಗಿದೆ. ಇಂದು ರೈತನಿಗೆ ಮಾರಕವಾಗಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿ ಉಳುವವನೇ ಭೂ ಒಡೆಯನಾಗಿದ್ದವನು. ಇಂದು ಸರ್ಕಾರದ ತಪ್ಪು ನೀತಿಯಿಂದ ಇದ್ದವನೇ ಭೂ ಒಡೆಯನಾಗುವ ಸಂದರ್ಭ ಬಂದೊದಗಿದ್ದು ವಿಷಾದಕರ. ರಾಜ್ಯದಲ್ಲಿ 1.23 ಲಕ್ಷ ಚದರ ಕಿ.ಮೀಯಷ್ಟು ಕೃಷಿಭೂಮಿ ಇದ್ದು, ಒಟ್ಟು ಭೌಗೋಳಿಕವಾಗಿ ಶೇ. 64 ಕೃಷಿ ಭೂಮಿ ಹೊಂದಿದೆ. ಆದರೆ, ಇಂದಿಗೂ ಆಹಾರ ಭದ್ರತೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮೂಲಕ ಆಹಾರ ಅಭದ್ರತೆಗೆ ಮಾರಕವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಇಂದು ರೈತ ಅತಿವೃಷ್ಟಿ, ಬೆಳೆಹಾನಿ, ಭತ್ತಕ್ಕೆ ಬೆಂಕಿ ರೋಗ, ಅಡಕೆ ಮತ್ತು ಶುಂಠಿಗೆ ಕೊಳೆರೋಗ, ಹಳದಿ ಎಲೆ ರೋಗ, ಬೆಳೆ ವಿಮೆ, ಪರಿಹಾರ, ಆಸಾಮಿ ಸಾಲ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ರೈತನಿಗೆ ಆರ್ಥೀಕ, ಸಾಮಾಜಿಕ ಭದ್ರತೆ ನೀಡುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದರು. ಜಿಲ್ಲಾ ಸಂಘದ ಅಧ್ಯಕ್ಷ ಸತೀಶ ನಾಯ್ಕ ಮಾತನಾಡಿ, ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಈ ವೇಳೆ ಶಿವಾನಂದ ಜೋಗಿ ಮುಂಡಗೋಡ, ನಾಗಣ್ಣ ಯಾಲಕ್ಕಿ ದಾಸನಕೊಪ್ಪ, ನವೀನ ಜಡಗದವರ, ಇಬ್ರಾಹಿಂಸಾಬ್ ಸೈಯದ್, ತಿಮ್ಮ ಮರಾಠಿ, ನೆಹರು ನಾಯ್ಕ ಬಿಳೂರ, ಎಂ.ಆರ್. ನಾಯ್ಕ ಕಂಡ್ರಾಜಿ, ಮೋಹನ ನಾಯ್ಕ ಅಂಡಗಿ, ದೇವರಾಜ ಕೊವೆರ ವದ್ದಲ, ರಾಜು ನಾಯ್ಕ ನರೇಬೈಲ್, ರೈತ ಸಂಘದ ಪ್ರವೀಣ ಜಕ್ಕಲಣ್ಣವರ ಇತರರಿದ್ದರು.