ಚಾಮರಾಜನಗರ: ಕೃಷಿ ಕ್ಷೇತ್ರದಲ್ಲಿ ಸೂಕ್ಷ್ಮಮತ್ತು ಶ್ರದ್ಧೆಯಿಂದ ದುಡಿಯುವ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಇಂತಹವರ ಸಾಲಿನಲ್ಲಿ ತಾಲೂಕಿನ ರೈತ ಮಹಿಳೆಯೊಬ್ಬರು ಸಾಧಕರಾಗಿ ಹೊರಹೊಮ್ಮಿದ್ದಾರೆ.
ತಾಲೂಕಿನ ಮಂಗಲ ಗ್ರಾಮದ ರೈತ ಲಕ್ಷ್ಮೀನಾರಾಯಣ ಅವರ ಪತ್ನಿ ಕೆ.ಎಂ.ಶ್ರುತಿ ಪ್ರಗತಿಪರ ರೈತರಾಗಿ ಮಾದರಿಯಾಗಿದ್ದಾರೆ. ಗ್ರಾಮದಲ್ಲಿರುವ 6 ಎಕರೆ ಜಮೀನಿನಲ್ಲಿ ಪತಿಯ ಮಾರ್ಗದರ್ಶನದಲ್ಲಿ ಸ್ವಯಂ ಪ್ರಯತ್ನವನ್ನೇ ನಂಬಿಕೊಂಡು ಕೃಷಿ ಕಾಯಕ ಮಾಡುತ್ತಿದ್ದಾರೆ. ಇವರ ಸಾಧನೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಪ್ರಶಸ್ತಿಗಳು ಬಂದಿವೆ.
ಪ್ರಸ್ತುತ ಜಮೀನಿನಲ್ಲಿ 80 ತೆಂಗಿನ ಮರಗಳಿವೆ. 50 ತೆಂಗಿನ ಸಸಿಗಳಿವೆ. ಅರಿಶಿಣ ನಾಟಿ ಮಾಡಲಾಗಿದೆ. ಗುಂಪು ವಿಧಾನದಲ್ಲಿ ಬಾಳೆ ಬೆಳೆದಿದ್ದರು. ಇದೀಗ ಮತ್ತೆ ಬಾಳೆ, ಕಬ್ಬು ಹಾಕಲು ನಿರ್ಧರಿಸಿದ್ದಾರೆ. ಒಂದು ಹಸು, ಎರಡು ಕರು, ಎರಡು ಮೇಕೆಗಳನ್ನು ಸಾಕಿದ್ದಾರೆ. ತೋಟದಲ್ಲೇ ಮನೆಯೂ ಇರುವುದರಿಂದ ಕೃಷಿ ಕೆಲಸಕ್ಕೆ ಸಮಯದ ಹೊಂದಾಣಿಕೆ ಕಷ್ಟವಾಗುತ್ತಿಲ್ಲ. ಮನೆಯ ಕೆಲಸಗಳೊಂದಿಗೆ ಕೃಷಿ ಕೆಲಸವನ್ನೂ ಮಾಡುತ್ತಿದ್ದಾರೆ.
ಪ್ರಗತಿಪರ ಯುವ ರೈತ ಮಹಿಳೆ ಪ್ರಶಸ್ತಿ:
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ 2024ರ ನ.14-17ರವರೆಗೆ ಆಯೋಜಿಸಿದ್ದ ಕೃಷಿ ಮೇಳದಲ್ಲಿ ಶ್ರುತಿ ಅವರಿಗೆ ಪ್ರಗತಿ ಪರ ಯುವ ರೈತ ಮಹಿಳೆ ಪ್ರಶಸ್ತಿ ನೀಡಲಾಗಿದೆ. ಚಾಮರಾಜನಗರದ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳು ಶ್ರುತಿ ಅವರ ಜಮೀನಿಗೆ ಭೇಟಿ ನೀಡಿ ಕೃಷಿ ಮಾಡುತ್ತಿರುವುದನ್ನು ಪರಿಶೀಲಿಸಿ ಆಯ್ಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶ್ರುತಿ ಅವರಿಗೆ ಚಾಮರಾಜನಗರ ತಾಲೂಕುಮಟ್ಟದ ಪ್ರಗತಿ ಪರ ಯುವ ರೈತ ಮಹಿಳೆ ಪ್ರಶಸ್ತಿಯನ್ನೂ ನೀಡಲಾಗಿತ್ತು. ಪ್ರಶಸ್ತಿಯು ಪ್ರಮಾಣಪತ್ರ, 5 ಸಾವಿರ ರೂ. ನಗದು, ಪಾರಿತೋಷಕವನ್ನು ಒಳಗೊಂಡಿತ್ತು.
ಪ್ರಶಸ್ತಿ ತಂದುಕೊಟ್ಟ ಸಾವಯವ ಬಾಳೆ ಬೆಳೆ
ಪ್ರಗತಿಪರ ರೈತ ಮಹಿಳೆ ಶ್ರುತಿ ಅವರಿಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಪ್ರಶಸ್ತಿ ನೀಡಲು ಸಾವಯವ ಪದ್ಧತಿಯಲ್ಲಿ ಬೆಳೆದಿದ್ದ ಬಾಳೆ ಬೆಳೆಯೇ ಕಾರಣ. ಜಮೀನಿನಲ್ಲಿ ಒಂದು ಮುಕ್ಕಾಲು ಎಕರೆಯಲ್ಲಿ ಬಾಳೆ ಹಾಕಿದ್ದರು. ಸಾವಯವ ವಿಧಾನದಲ್ಲಿ ಬಾಳೆ ಬೆಳೆದು ಸೈ ಎನಿಸಿಕೊಂಡಿದ್ದಾರೆ. 6 ಎಕರೆ ಭೂಮಿಯಲ್ಲಿ ಒಂದು ಮುಕ್ಕಾಲು ಎಕರೆ ಜಮೀನು ರಾಸಾಯನಿಕ ಮುಕ್ತವಾಗಿರುವುದು ಸಾವಯವ ಕೃಷಿಯ ಮಹತ್ವ ಮತ್ತು ಪರಿಣಾಮವನ್ನು ತಿಳಿಸಿಕೊಟ್ಟಿದೆ. ಕೊಟ್ಟಿಗೆ ಗೊಬ್ಬರ, ಜೀವಾಮೃತ ಬಳಕೆಯಿಂದ ಮಣ್ಣು ಲವತ್ತತೆಯಿಂದ ಕೂಡಿದೆ. ಭೂಮಿಯಲ್ಲಿ ಎರೆಹುಳುಗಳು ಸಮೃದ್ಧವಾಗಿವೆ. ಅದೇ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡಿದರೆ, ಭೂಮಿಯ ಲವತ್ತತೆಯೂ ಹಾಳಾಗುತ್ತದೆ.
ಕೆವಿಕೆಯಲ್ಲಿ ತರಬೇತಿ:
ಚಾಮರಾಜನಗರದ ಕೃಷಿ ವಿಜ್ಞಾನ ಕೇಂದ್ರ ರೈತರಿಗೆ ಸುಸ್ಥಿರ ಕೃಷಿಯ ಜ್ಞಾನವನ್ನು ತುಂಬುತ್ತಿದೆ. ಕೆವಿಕೆಯಲ್ಲಿ ತರಬೇತಿ ಪಡೆದ ಹಲವು ರೈತರು ಸಾವಯವ ಕೃಷಿ ಮಾಡುತ್ತಿದ್ದಾರೆ. ಅಲ್ಲದೆ, ಮಾದರಿ ಕೃಷಿಕರಾಗಿಯೂ ಹೊರಹೊಮ್ಮಿದ್ದಾರೆ. ರೈತ ಮಹಿಳೆ ಶ್ರುತಿ ಅವರೂ ಕೂಡ ಕೆವಿಕೆಯ ತರಬೇತಿಗಳಿಂದ ಹದವಾದವರು. ಸಹೋದರನೊಂದಿಗೆ ಕೆವಿಕೆಯಲ್ಲಿ ಆಯೋಜಿಸಿದ್ದ ತರಬೇತಿಯಲ್ಲಿ ಶ್ರುತಿ ಭಾಗವಹಿಸಿದ್ದರು. ಈ ವೇಳೆ ವೈಜ್ಞಾನಿಕ ವಿಧಾನದ ಕುರಿತು ತಿಳಿದುಕೊಂಡರು. ಸಾವಯವ ಕೃಷಿ ಆರಂಭಿಸಿದರು.
ಮಹಿಳಾ ಕೃಷಿಕರಿಗೆ ಪ್ರೋತ್ಸಾಹ ಅಗತ್ಯ: ಕೃಷಿ ಕ್ಷೇತ್ರದಲ್ಲಿ ಮಹಿಳಾ ರೈತರಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸೊಪ್ಪಿನ ಪುಟ್ಟೀರಮ್ಮ ಅವರಂತಹ ರೈತ ಮಹಿಳೆಯರ ಸಂಖ್ಯೆ ಹೆಚ್ಚಾಗಬೇಕಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ರೈತ ಮಹಿಳೆಯರು ಕೃಷಿ ಕಾಯಕದಲ್ಲಿ ಕೂಲಿಕಾರರಾಗಿ ದುಡಿಯದೆ ರೈತರಾಗಿ ಬೆಳೆ ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಶ್ರುತಿ ಅವರಂತಹ ರೈತ ಮಹಿಳೆಯರು ಮಾದರಿಯಾಗುತ್ತಿದ್ದಾರೆ.
ಸಾವಯವ ಕೃಷಿಯಲ್ಲಿ ಪ್ರಾರಂಭದಲ್ಲೇ ಲಾಭ ಕಾಣಲು ಸಾಧ್ಯವಿಲ್ಲ. ಆದರೆ ವರ್ಷ ಕಳೆಯುತ್ತಿದ್ದಂತೆಯೇ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಕಾಣಬಹುದು. ಮಣ್ಣಿನ ಲವತ್ತತೆಯೂ ಹೆಚ್ಚಾಗುತ್ತದೆ. ಕೆ.ಎಂ.ಶ್ರುತಿ ಲಕ್ಷ್ಮಿನಾರಾಯಣ, ಪ್ರಗತಿಪರ ಯುವ ರೈತ ಮಹಿಳೆ ಪ್ರಶಸ್ತಿ ಪುರಸ್ಕೃತೆ, ಮಂಗಲ, ಚಾಮರಾಜನಗರ