ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಮತ್ತು ಕಾರ್ಮಿಕರ ವಿರೋಧಿ ನೀತಿಯನ್ನು ಖಂಡಿಸಿ ಮಂಗಳವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಎಲ್ಲಾ ಬೆಳೆಗಳಿಗೆ ಸಿ2+ ಶೇ.50 ಜೊತೆಗೆ ಬೆಂಬಲ ಬೆಲೆಯನ್ನು ಕಾನೂನು ಬದ್ಧವಾಗಿಸಬೇಕು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿ, ಯಾವುದೇ ರೂಪದಲ್ಲಿ ಕಾರ್ಮಿಕರ ಗುತ್ತಿಗೆ ಅಥವಾ ಹೊರಗುತ್ತಿಗೆ ಪದ್ಧತಿ ಇರಬಾರದು. ರಾಷ್ಟ್ರೀಯ ಕನಿಷ್ಠ ವೇತನ ತಿಂಗಳಿಗೆ 26,000ರೂ. ಜಾರಿಗೊಳಿಸಬೇಕು. ಸಂಘಟಿತ, ಅಸಂಘಟಿತ, ಯೋಜನೆ ಕಾರ್ಯಕರ್ತರು ಮತ್ತು ಗುತ್ತಿಗೆ ಕಾರ್ಮಿಕರು ಮತ್ತು ಕೃಷಿ ವಲಯ ಸೇರಿ ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಪ್ರಯೋಜನ ಒದಗಿಸಿ ಮಾಸಿಕ 10,000ರೂ. ಪಿಂಚಣಿ ನೀಡಬೇಕೆಂದು ಒತ್ತಾಯಿಸಿದರು.
ಸಾಲಬಾಧೆ ಮತ್ತು ಆತ್ಮಹತ್ಯೆಗಳನ್ನು ಕೊನೆಗೊಳಿಸಲು ರೈತರು ಮತ್ತು ಕೃಷಿ ಕಾರ್ಮಿಕರಿಗೆ ಸಮಗ್ರ ಸಾಲ ಮನ್ನಾ, ರೈತರಿಗೆ ಮತ್ತು ಕಾರ್ಮಿಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ಖಚಿತಪಡಿಸಬೇಕು. ರಕ್ಷಣಾ, ರೈಲ್ವೆ, ಆರೋಗ್ಯ, ಶಿಕ್ಷಣ, ವಿದ್ಯುತ್ ಸೇರಿ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸಾರ್ವಜನಿಕ ಸೇವೆಗಳ ಖಾಸಗೀಕರಣ ಮಾಡಬಾರದು. ಕೃಷಿ ಪಂಪ್‌ಗಳಿಗೆ ಉಚಿತ ವಿದ್ಯುತ್, ಪ್ರಿಪೇಯ್ಡಿ ಸ್ಮಾರ್ಟ್ ಮೀಟರ್‌ಗಳ ಅಳವಡಿಸಬಾರದು. ಗೃಹ ಬಳಕೆದಾರರಿಗೆ ಮತ್ತು ಅಂಗಡಿಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ಡಿಜಿಟಲ್ ಕೃಷಿ ಮಿಷನ್ (ಡಿಎಎಂ), ರಾಷ್ಟ್ರೀಯ ಸಹಕಾರ ನೀತಿ ಮತ್ತು ಎಂಎನ್‌ಸಿಗಳೊಂದಿಗೆ ಐಸಿಎಆರ್ ಒಪ್ಪಂದಗಳು ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಅತಿಕ್ರಮಿಸುತ್ತವೆ. ಕೃಷಿಯ ಕಾರ್ಪೊರೇಟೀಕರಣವನ್ನು ಸುಗಮಗೊಳಿಸುತ್ತವೆ. ವಿವೇಚನೆಯಿಲ್ಲದ ಭೂ ಸ್ವಾಧೀನವನ್ನು ಕೊನೆಗೊಳಿಸಿ, ಎಲ್‌ಎಆರ್‌ಆ ಕಾಯ್ದೆ- 2013 ಮತ್ತು ಎಫ್‌ಆರ್ ಅನ್ನು ಜಾರಿಗೊಳಿಸಬೇಕು. ನರೇಗಾ ಯೋಜನೆಯಡಿ ಎಲ್ಲರಿಗೂ ಉದ್ಯೋಗ ಖಾತ್ರಿ ಮತ್ತು ಉದ್ಯೋಗ ಭದ್ರತೆ ನೀಡಿ 200 ದಿನಗಳ ಕೆಲಸ ಮತ್ತು 600 ದಿನ ಕೂಲಿ ನೀಡಬೇಕು. ಈ ಯೋಜನೆ ನಗರ ಪ್ರದೇಶಗಳಿಗೂ ವಿಸ್ತರಿಸಬೇಕೆಂದು ಒತ್ತಾಯಿಸಿದರು.
ಬೆಳೆಗಳು ಮತ್ತು ಜಾನುವಾರುಗಳಿಗೆ ಸಮಗ್ರ ಸಾರ್ವಜನಿಕ ವಲಯದ ವಿಮಾ ಯೋಜನೆ, ಬೆಳೆ ವಿಮೆ ಮತ್ತು ಗೇಣಿದಾರ ರೈತರಿಗೆ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಖಚಿತಪಡಿಸಬೇಕು. ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಬಲಪಡಿಸಿ, ಎಲ್ಲರಿಗೂ ಗುಣಮಟ್ಟದ ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣವನ್ನು ನೀಡಬೇಕು. ಎಲ್ಲರಿಗೂ 60 ವರ್ಷ ವಯಸ್ಸಿನಲ್ಲಿ 10,000ರೂ. ಮಾಸಿಕ ಪಿಂಚಣಿ ನೀಡಬೇಕು. ಸಮಾಜದಲ್ಲಿ ಕೋಮು ವಿಭಜನೆಯನ್ನು ನಿಲ್ಲಿಸಲು ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನಗೊಳಿಸಿ, ಕಠಿಣ ಕಾನೂನು, ಸಂವಿಧಾನದಲ್ಲಿ ಕಲ್ಪಿಸಿರುವ ಜಾತ್ಯತೀತತೆಯನ್ನು ಎತ್ತಿ ಹಿಡಿಯಬೇಕು. ಮಹಿಳಾ ಸಬಲೀಕರಣ ಮತ್ತು ತ್ವರಿತ ನ್ಯಾಯಾಂಗ ವ್ಯವಸ್ಥೆಯ ಮೂಲಕ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಬೇಕು. ದಲಿತರು, ಬುಡಕಟ್ಟು ಜನರು ಮತ್ತು ಅಲ್ಪಸಂಖ್ಯಾತರು ಸೇರಿ ಎಲ್ಲಾ ಅಂಚಿನಲ್ಲಿರುವ ವರ್ಗಗಳ ವಿರುದ್ಧ ಹಿಂಸೆ, ಸಾಮಾಜಿಕ ದಬ್ಬಾಳಿಕೆ ಮತ್ತು ಜಾತಿ-ಕೋಮು ತಾರತಮ್ಯವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ಅರವಿಂದ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ಎಚ್.ಎಸ್.ಮಂಜುನಾಥ್, ರಾಜ್ಯ ರೈತ ಸಂಘದ ವಾಜಿದ್, ರವಿ, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕರಾದ ಎಂ.ಜಿ.ಪೃಥ್ವಿ, ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಇದ್ದರು.