ಜಿಲ್ಲೆ

ರೈತ ಭವನದಲ್ಲಿ ನಾಗರಿಕರ ಅಹವಾಲು ಆಲಿಸುವ ಸಭೆ

reportermys

ಅರಸೀಕೆರೆ : ನಗರದ ತಾಲೂಕು ಕಚೇರಿ ಆವರಣದಲ್ಲಿರುವ ರೈತ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಸಮ್ಮುಖದಲ್ಲಿ ಸಾರ್ವಜನಿಕರ ಅಹವಾಲು ಆಲಿಸುವ ಸಭೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಸಾಮಾಜಿಕ ಹೋರಾಟಗಾರ ರಾಘವೇಂದ್ರ ನಡುವೆ ಮಾತಿನ ಜಟಾಪಟಿಗೆ ವೇದಿಕೆಯಾಗಿತ್ತು.

ಮಾಲೇಕಲ್ ತಿರುಪತಿ-ಹುಳಿಯಾರು ಸಂಪರ್ಕ ರಸ್ತೆಗೆ ಹೊಂದಿಕೊಂಡಂತಿರುವ ಹಿಂದು ರುದ್ರಭೂಮಿ ಕುಡಿಯುವ ನೀರು, ವಿದ್ಯುತ್ ಸೌಕರ್ಯ ಸೇರಿ ಮೂಲ ಸೌಕರ್ಯ ವಂಚಿತವಾಗಿದ್ದು ಶವ ಸಂಸ್ಕಾರಕ್ಕೆ ಆಗಮಿಸುವ ಸಂಬಂಧಿಕರ ಗೋಳು ಹೇಳ ತೀರದಾಗಿದೆ.ಈ ಸಂಬಂಧ ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಗರದ ಬಹುತೇಕ ತ್ಯಾಜ್ಯ ರಸ್ತೆ ಬದಿಗೆ ಸುರಿಯುತ್ತಿದ್ದು ದೇವರ ದರ್ಶನಕ್ಕೆ ಮೂಗು ಮುಚ್ಚಿ ಹೋಗುವ ಸನ್ನಿವೇಶ ನಿರ್ಮಾಣಗೊಂಡಿದೆ ಎಂದು ದಾಖಲೆ ಸಹಿತ ಗಮನಸೆಳೆದರು.

ಇದರ ನಡುವೆ ಮೈಕ್ ಹಿಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅದೇನು ತೊಂದರೆ ನನಗೆ ಹೇಳಿ ಎಂದು ಏರು ದನಿಯಲ್ಲಿ ತಾಕೀತು ಮಾಡಿದರು. ಇದರಿಂದ ಕೆರಳಿದ ರಾಘವೇಂದ್ರ ಇದು ನಿಮ್ಮ ನೇತೃತ್ವದಲ್ಲಿ ಕರೆದಿರುವ ಸಭೆಯಲ್ಲೆಂದು ಮೊದಲು ನೀವು ಅರ್ಥ ಮಾಡಿಕೊಳ್ಳಿ. ಎಲ್ಲ ವಿಷಯದಲ್ಲೂ ಮೂಗು ತೂರಿಸುವುದು ಸರಿಯಲ್ಲ ಸುಮ್ಮನಿರಿ ಎಂದು ಪ್ರತ್ಯುತ್ತರ ನೀಡಿದರು. ಈ ವೇಳೆ ಕ್ಷಣ ಕಾಲ ಗೊಂದಲ ನಿರ್ಮಾಣಗೊಂಡು ಯಾರು ಏನು ಹೇಳುತ್ತಿದ್ದಾರೆ ಎನ್ನುವುದೇ ತಿಳಿಯದಂತಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ಎಲ್ಲರನ್ನೂ ಸಮಧಾನಗೊಳಿಸಿದರು. ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.ರಸ್ತೆ ಬದಿ ಕಸ ಸುರಿಯುವ ಕಿಡಿಗೇಡಿಗಳ ಪತ್ತೆಗೆ ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಅಳವಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.


ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಸುಬೇದಾರ್ ಚಂದ್ರಪ್ಪ,ಅಣ್ಣೇಗೌಡ, ನವೀನ್ ಕುಮಾರ್, ನಾಗಭೂಷಣ, ವಿಜಯಾನಂದ ಮೊದಲಾದವರು ಜಮೀನು ಮಂಜೂರು ಮಾಡಿಕೊಡುವಂತೆ ಮನವಿ ಸಲ್ಲಿಸಿದರು.

ನಗರ ನಿವಾಸಿ ಎಂ.ಎನ್.ಸದಾಶಿವಪ್ಪ ಹಳೆಯ ದಾಖಲೆಗಳನ್ನು ಪರಿಶೀಲಿಸಿ ಇಸ್ವತ್ತು ನೀಡಬೇಕೆಂದು ಕೋರಿದರು. ದಲಿತ ಸಂಘರ್ಷ ಸಮಿತಿ ಮುಖಂಡ ಎ.ಪಿ.ಚಂದ್ರಯ್ಯ, ಮಾನವ ಹಕ್ಕುಗಳ ರಕ್ಷಣಾ ಸಮಿತಿ ಪದಾಧಿಕಾರಿಗಳು, ರೈತರು, ಸ್ಥಳೀಯರು ತಮ್ಮ ಅವಹಾಲು ಆಲಿಸಿ ಪರಿಹಾರ ಒದಗಿಸುವಂತೆ ಕೋರಿ ಸರತಿ ಸಾಲಿನಲ್ಲಿ ನಿಂತು ಅರ್ಜಿ ನೀಡಿದರು.

ಕಾಳನಕೊಪ್ಪಲು ಬಡಾವಣೆಯ ನಗರಸಭಾ ಸದಸ್ಯ ಈಶ್ವರಪ್ಪ ಗಂಗಾ ನಗರ ನಿವಾಸಿಗಳ ಹಿತಕಾಯುವಂತೆ ಮನವಿ ಮಾಡಿದರು.ಎಲ್ಲರಿಂದ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥ ಪಡಿಸುವುದಾಗಿ ಹೇಳಿದರು.

ನಗರಸಭೆ ಅಧ್ಯಕ್ಷ ಸಿ.ಗಿರೀಶ್, ಕಂದಾಯ ಉಪ ವಿಭಾಗಾಧಿಕಾರಿ ಬಿ.ಎ.ಜಗದೀಶ್, ತಹಸೀಲ್ದಾರ್ ವಿಭಾ ವಿ ರಾಥೋಡ್, ಡಿವೈಎಸ್‌ಪಿ ಅಶೋಕ್ ಪಾಲ್ಗೊಂಡಿದ್ದರು.ಕಂದಾಯ, ಕೃಷಿ, ಆಹಾರ, ಶಿಕ್ಷಣ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ಜಿಲ್ಲಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.