ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ಏರ್ಪಡಿಡಿರುವ ಕೃಷಿ ಮೇಳದ ಮೂರನೇ ದಿನವಾದ ಸೋಮವಾರ ಜನಸಾಗರವೇ ಹರಿದು ಬಂದಿತ್ತು.
ನಗರದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಏರ್ಪಡಿಸಿರುವ ಕೃಷಿ ಮೇಳಕ್ಕೆ ಮೊದಲ ದಿನವಾದ ಶನಿವಾರ ಅಷ್ಟೊಂದು ಸ್ಪಂದನೆ ಸಿಕ್ಕಿರಲಿಲ್ಲ. ಆದರೆ ಭಾನುವಾರ ಹಾಗೂ ಸೋಮವಾರ ಜನಸಾಗರವೇ ಹರಿದು ಬಂದಿದೆ.
ಬಾಗಕೋಟೆ, ವಿಜಯಪುರ, ಗದಗ, ಹಾವೇರಿ, ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳ ಲಕ್ಷಾಂತರ ಜನರು ಕ್ರೂಸರ್, ಬಸ್, ಟೆಂಪೊಗಳ ಮೂಲಕ ಸಾಮೂಹಿಕವಾಗಿ ಮೇಳಕ್ಕೆ ಆಗಮಿಸಿ ಪ್ರಯೋಜನ ಪಡೆದರು.
ಕೃವಿವಿ ಆವರಣದ ಸುತ್ತಲಿನ ಪ್ರದೇಶ ವಾಹನಗಳಿಂದ ತುಂಬಿದ್ದಲ್ಲದೆ, ಲಕ್ಷಾಂತರ ಜನರು ಒಂದೆಡೆ ಸೇರಿದ್ದರಿಂದ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಎದುರಾಗಿ ಕಳೆದು ಹೋದ ಸಂಬಂಧಿಕರು, ಗೆಳೆಯರನ್ನು ಹುಡುಕುವಲ್ಲಿ ಸಹ ಜನರು ಹೈರಾಣಾಗಿದ್ದರು.
ಜನರು ಬೀಜ ಘಟಕಕ್ಕೆ ಭೇಟಿ ನೀಡಿ ಹಿಂಗಾರು ಬೆಳೆಗೆ ಉತ್ತಮ ಬೀಜಗಳನ್ನು ಖರೀದಿಸಿದರು. ಇದಲ್ಲದೆ ಕೃಷಿ ತಂತ್ರಜ್ಞಾನ ಸಲಹಾ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಯಂತ್ರೋಪಕರಣ, ಕೃಷಿ ಪರಿಕರಗಳ ಮಾರಾಟದ ಭರಾಟೆಯೂ ಜೋರಾಗಿತ್ತು.