ಜಿಲ್ಲೆ

ರೈತ, ಕನ್ನಡ ಚಳವಳಿ ತವರೂರು ಚನ್ನಪಟ್ಟಣ ; ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅನಿಸಿಕೆ

ಚನ್ನಪಟ್ಟಣ: ರೈತ ಹಾಗೂ ಕನ್ನಡ ಚಳವಳಿಗೆ ಚನ್ನಪಟ್ಟಣವೇ ತವರೂರು. ದಿ. ಸಿಂ.ಲಿಂ. ನಾಗರಾಜು ಈ ನೆಲದ ಚಳವಳಿಯ ಅಸ್ಮಿತೆ. ಒಬ್ಬ ಹೋರಾಟಗಾರರನ್ನು ಸ್ಮರಿಸುತ್ತಿರುವುದು ಈ ನೆಲದ ಚಳವಳಿ ಪ್ರೀತಿಗೆ ಸಾಕ್ಷಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದರು.

ನಗರದ ಶತಮಾನೋತ್ಸವ ಭವನದಲ್ಲಿ ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿಂ.ಲಿಂ.ನಾಗರಾಜು ಸಂಸ್ಮರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಿಂಲಿಂ ಸೇವಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಚನ್ನಪಟ್ಟಣ ತಾಲೂಕು ಯಾವುದರಲ್ಲೂ ಕಡಿಮೆ ಇಲ್ಲ. ಎಲ್ಲ ರಂಗಗಳಲ್ಲೂ ಸಾಧನೆ ಮಾಡಿರುವ ಕೀರ್ತಿ ಈ ನೆಲಕ್ಕಿದೆ. ಸಿಂ.ಲಿಂ. ನಾಗರಾಜು ಅವರು ಈ ಮಣ್ಣಿನ ಅಪರೂಪದ ಹೋರಾಟಗಾರರು. ಅವರಿಗೆ ಕನ್ನಡದ ಬಗ್ಗೆ ಕಾಳಜಿ ಬದ್ಧತೆ ಇತ್ತು. ಕನ್ನಡ ವಿರೋಧಿತನವನ್ನು ಸಹಿಸುತ್ತಿರಲಿಲ್ಲ. ನಾವು ಎಷ್ಟು ದಿನ ಬದುಕುತ್ತೇವೆ ಎಂಬುದು ಮುಖ್ಯವಲ್ಲ. ಸತ್ತ ಮೇಲೆ ಸಾಧನೆ ಉಳಿಯುವುದು ಮುಖ್ಯ ಎಂದರು.

ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ಮಾತನಾಡಿ, ಸಿಂಲಿಂ ಸರಳ ಸಜ್ಜನಿಕೆಯ ವ್ಯಕ್ತಿ. ಸಣ್ಣ ಕಾರ್ಯಕ್ರಮವಿದ್ದರೂ ಅಲ್ಲಿ ಹಾಜರಿರುತ್ತಿದ್ದರು. ಮನುಷ್ಯ ಹುಟ್ಟುವಾಗ ಏನೂ ತರುವುದಿಲ್ಲ, ಹೋಗುವಾಗ ಏನೂ ಹೊತ್ತು ಹೋಗುವುದಿಲ್ಲ. ಆದರೆ, ಸಾಧನೆ ಮಾತ್ರ ಉಳಿಯುತ್ತದೆ. ಹುಟ್ಟಿದ ಮೇಲೆ ನಾಲ್ಕು ಜನರಿಗೆ ನೆರವಾಗಿ, ಅಮರವಾಗಿ ಉಳಿಯಬೇಕು ಎಂದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸಿಂಲಿಂ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಳೆದ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ ನೀಡಲಾಯಿತು.

ಬೆಂಗಳೂರು ಅಧ್ಯಕ್ಷ ಧರ್ಮರಾಜ್, ಸಹ ಕಾರ್ಯದರ್ಶಿ ಎಂ.ಎನ್.ಸತ್ಯನಾರಾಯಣ, ಜಿಲ್ಲಾಧ್ಯಕ್ಷ ಕಬ್ಬಾಳೇಗೌಡ, ತಾಲೂಕು ಅಧ್ಯಕ್ಷ ಹೊ.ಪು.ಸಾಗರ್, ಪ್ರತಿಷ್ಠಾನ ಅಧ್ಯಕ್ಷ ನಾಗವಾರ ಶಂಭೂಗೌಡ, ಕಾರ್ಯದರ್ಶಿ ರಜನಿ ಆದರ್ಶ ಕುಮಾರ್, ಖಜಾಂಚಿ ಟಿ.ಎಸ್.ಅಭಿಲಾಷ್ ಮತ್ತಿತರರು ಇದ್ದರು.

ಚಳವಳಿಗೆ ಬನ್ನಿ!! : ಯುವಕರು ರಾಜಕಾರಣಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ, ರಾಜಕಾರಣಿಗಳು ಅವರ ಕುಟುಂಬದ ಬಗ್ಗೆ ಯೋಚಿಸುತ್ತಾರೆ. ಇಂದಿನ ರಾಜಕೀಯ ನೋಡಿದರೆ ಅಸಹ್ಯ ಅನಿಸುತ್ತದೆ. ರಾಜ್ಯದ ನೆಲ ಹಾಗೂ ಜಲಕ್ಕಾಗಿ ಹೋರಾಡಿ ಜೈಲಿಗೆ ಹೋದ ಒಬ್ಬ ಶಾಸಕ ನಮ್ಮ ರಾಜ್ಯದಲ್ಲಿಲ್ಲ. ಎಲ್ಲ ರಾಜಕಾರಣಿಗಳ ರಕ್ತದ ಗ್ರೂಪ್ ಒಂದೇ.

ಅವನು ನೂರು ತಿಂದ, ನಾವು ಐವತ್ತು ತಿಂದಿದ್ದೇವೆ ಎಂದು ವಿಧಾನಸೌಧದಲ್ಲಿ ಮಾತನಾಡುತ್ತಾರೆ. ಆದರೆ, ನಾಡು ನುಡಿಯ ಬಗ್ಗೆ ಒಬ್ಬರೂ ಮಾತನಾಡುವುದಿಲ್ಲ. ರೈತರ ಭೂಮಿ ಕಿತ್ತು ಮಾರ್ವಾಡಿಗಳಿಗೆ ಮಾರಿದ್ದಾರೆ. ನಮ್ಮ ರಾಜಕಾರಣಿಗಳಿಂದ ಕಾವೇರಿ, ಕೃಷ್ಣ ಹಾಗೂ ಬೆಳಗಾವಿ ಗಡಿ ವಿಚಾರಕ್ಕೆ ಪರಿಹಾರ ಸಿಕ್ಕಿಲ್ಲ. ಅವರಿಗೆ ಸಮಸ್ಯೆ ಇರುವುದು ಬೇಕೇ ವಿನಾ ಪರಿಹರಿಸುವುದು ಬೇಕಿಲ್ಲ.

ಶಾಂತವೇರಿ, ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಇಂದಿನ ರಾಜಕಾರಣಿಗಳಿಗೆ ಆರ್ದಶವಾಗಬೇಕು. ಇಂದಿನ ಪ್ರಧಾನಿ ಧರಿಸುವ ಬಟ್ಟೆಗೆ ಲಕ್ಷಾಂತರ ರೂ. ಆಗುತ್ತದೆ. ಆದರೆ, ಆದರ್ಶಗಳೇ ಮಾಯವಾಗಿದೆ. ನಮ್ಮ ಯುವಕರು ರಾಜಕಾರಣಿಗಳು ಹಿಂದೆ ಹೋಗಬೇಡಿ. ಕನ್ನಡ ಹಾಗೂ ರೈತ ಚಳುವಳಿಗೆ ಬನ್ನಿ ಎಂದು ಟಿ.ಎ.ನಾರಾಯಣಗೌಡ ಕರೆನೀಡಿದರು.