ತುಮಕೂರು: ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅಗತ್ಯವಿರುವ ಹಣಕಾಸಿನ ನೆರವು ಪಡೆಯಲು ಜಿಲ್ಲೆಯಲ್ಲಿರುವ ರೈತ ಉತ್ಪಾದಕ ಸಂಘ ಬಲಿಷ್ಠವಾಗಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು. ಜಿಪಂ ಸಭಾಂಗಣದಲ್ಲಿ ಮಂಗಳವಾರ ಕೃಷಿ ಇಲಾಖೆ ವತಿಯಿಂದ ‘ಒಂದು ಜಿಲ್ಲೆ-ಒಂದು ಉತ್ಪನ್ನ’ ತೆಂಗು ಬೆಳೆ ಅವಲಂಬಿತ ಉತ್ಪನ್ನಗಳ, ಸಿರಿಧಾನ್ಯಗಳ ಮೌಲ್ಯವರ್ಧಿತ ಪದಾರ್ಥಗಳ ರಫ್ತು ಗುಣಮಟ್ಟ ಕಾಯ್ದುಕೊಳ್ಳುವ ಕುರಿತು ರೈತ ಉತ್ಪಾದಕರ ಸಂಘಗಳಿಗಾಗಿ ಏರ್ಪಡಿಸಿದ್ದ ಒಂದು ದಿನದ ಅರಿವು ಕಾರ‌್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು, ನಬಾರ್ಡ್, ಬ್ಯಾಂಕಿನ ಅಧಿಕಾರಿಗಳು ಸಮನ್ವಯತೆಯಿಂದ ರೈತ ಉತ್ಪಾದಕರ ಸಂಘಗಳಿಗೆ ಸಾಲ ಒದಗಿಸುವ ಮೂಲಕ ಹೆಚ್ಚು ಬಲಿಷ್ಠಗೊಳಿಸಿ ಬೆನ್ನೆಲುಬಾಗಿ ನಿಂತಾಗ ಮಾತ್ರ ರೈತರು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು. ಸರ್ಕಾರದಿಂದ ಕೃಷಿಯನ್ನು ಉತ್ತೇಜಿಸಲು ಹಲವಾರು ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಗಳ ಲಾಭ ಕಟ್ಟಕಡೆಯ ಫಲಾನುಭವಿಗಳಿಗೆ ತಲುಪಿದಾಗ ಯೋಜನೆ ಯಶಸ್ವಿಯಾಗುತ್ತದೆ ಎಂದರು. ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದಡಿ ಆಯ್ಕೆಯಾಗಿರುವ ತೆಂಗು ಬೆಳೆ ಅವಲಂಬಿತ ಆಹಾರ ಕಿರು ಉದ್ದಿಮೆ, ಮಾರಾಟ ಮತ್ತು ರಫ್ತು ಘಟಕ ಸ್ಥಾಪಿಸುವ ಸಣ್ಣ ಉದ್ದಿಮೆದಾರರಿಗೆ ಸರ್ಕಾರದಿಂದ ನೀಡಲಾಗುವ ಸಹಾಯಧನ ಬಳಸಿಕೊಂಡು ರೈತರು ಅಭಿವೃದ್ಧಿ ಹೊಂದಬೇಕು. ಕೃಷಿಕರು ಉತ್ಪಾದಿಸಿದ ಬೆಳೆಯ ಸಂಸ್ಕರಣೆ, ಕೃಷಿಯಲ್ಲಿ ಹೊಸ ಸಂಶೋಧನೆಗಳ ಅಳವಡಿಕೆ ವಿಧಾನದ ಬಗ್ಗೆ ರೈತರಿಗೆ ಅರಿವು ಮೂಡಿಸಲು ಶ್ರಮಿಸುತ್ತಿರುವ ಸರ್ಕಾರ ಸ್ವಾಮ್ಯದ ಸಿಎಫ್‌ಟಿಆರ್‌ಐ ಸಂಸ್ಥೆಯ ಲಾಭ ಪಡೆಯಬೇಕು ಎಂದರು. ದುಡಿಯುವ ರೈತನು ಹೊಸ ಸಂಶೋಧನೆ, ಸಂಸ್ಕರಣೆ ಹಾಗೂ ವ್ಯಾಪಾರದಿಂದ ಲಾಭ ಪಡೆಯಬೇಕೆನ್ನುವ ಸದುದ್ದೇಶದಿಂದ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗಿದೆ, ಆಹಾರ ಸಂಸ್ಕರಣೆ ಉದ್ದಿಮೆಗಳನ್ನು ಪ್ರಾರಂಭಿಸಲು ಸ್ವಸಹಾಯ ಸಂಘ, ರೈತ ಉತ್ಪಾದಕ ಸಂಘ ಹಾಗೂ ಸಹಕಾರ ಸಂಘಗಳಿಗೆ ಬಂಡವಾಳ ವೆಚ್ಚಕ್ಕಾಗಿ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಕೆಪೆಕ್ ಸಂಸ್ಥೆ ಚಂದ್ರಕುಮಾರ್, ಮೈಸೂರು ಸಿಎಫ್‌ಟಿಆರ್‌ಐ ವಿಜ್ಞಾನಿ ಡಾ.ಎ.ಹೃಷಿಕೇಶ್ ತವನಂದಿ ಉಪನ್ಯಾಸ ನೀಡಿದರು. ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣಪ್ಪ, ಕೃಷಿ ಸಹಾಯಕ ನಿರ್ದೇಶಕಿ ಲತಾ, ನಬಾರ್ಡ್ ವ್ಯವಸ್ಥಾಪಕಿ ಕೀರ್ತಿ ಮತ್ತಿತರರು ಇದ್ದರು.
ರೈತ ಬೆಳೆದ ಬೆಳೆ ಮತ್ತೊಂದು ಉತ್ಪನ್ನವಾಗಿ ಪರಿವರ್ತನೆಯಾದರೆ ಅಭಿವೃದ್ಧಿ ಸಾಧ್ಯ, ಸರ್ಕಾರದಿಂದ ತೆಂಗು ಸಂಸ್ಕರಣಾ ಘಟಕಗಳನ್ನು ಹೊಸದಾಗಿ ಸ್ಥಾಪಿಸಲು, ಬ್ರಾಂಡಿಂಗ್ ಮಾರ್ಕೆಟಿಂಗ್ ಒದಗಿಸಲು, ಉನ್ನತೀಕರಣಗೊಳಿಸಲು, ವಿಸ್ತರಣೆ ಸಂಸ್ಥೆಗಳ ಬಲವರ್ಧನೆಗೆ ನೆರವು ನೀಡಲಾಗುತ್ತಿದ್ದು ರೈತರು ಬಳಸಿಕೊಳ್ಳಬೇಕು. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ