ಶಿಡ್ಲಘಟ್ಟ: ನಗರದ ರೇಷ್ಮೆಗೂಡು ಮಾರುಕಟ್ಟೆಗೆ ಆವಕವಾಗುತ್ತಿರುವ ಗೂಡಿನ ಪ್ರಮಾಣ ದಿನೇದಿನೆ ಕುಸಿಯುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ಮಾರುಕಟ್ಟೆಯನ್ನು ಮುಚ್ಚಬೇಕಾಗುತ್ತದೆ ಎಂದು ಮಾರುಕಟ್ಟೆ ಉಪ ನಿರ್ದೇಶಕ ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದರು.
ಶಿಡ್ಲಘಟ್ಟ ಪ್ರವಾಸಿ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ರೇಷ್ಮೆ ಬೆಳೆಗಾರರು, ರೀಲರುಗಳು ಹಾಗೂ ರೇಷ್ಮೆ ಮಾರುಕಟ್ಟೆ, ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಈ ಮಾರುಕಟ್ಟೆ ದೇಶದಲ್ಲೇ ಅತಿ ಹೆಚ್ಚು ವಹಿವಾಟು ನಡೆಯುವ ಖ್ಯಾತಿ ಪಡೆದಿದೆ. ಆದರೆ ಇತ್ತೀಚೆಗೆ ಆವಕವಾಗುತ್ತಿರುವ ಗೂಡಿನ ಪ್ರಮಾಣ ತೀವ್ರವಾಗಿ ಕುಸಿದಿದೆ. ಒಂದು ಕಾಲದಲ್ಲಿ 1500 ಲಾಟುಗಳು ಅಂದರೆ ಸುಮಾರು 75 ಸಾವಿರ ಕೆಜಿ ರೇಷ್ಮೆಗೂಡು ಬರುತ್ತಿತ್ತು. ಆದರೆ ಇದೀಗ 300 ಲಾಟುಗಳು ಬಂದರೆ ಹೆಚ್ಚು ಎನ್ನುವಂತಹ ಪರಿಸ್ಥಿತಿ ಬಂದಿದೆ ಎಂದರು.
ಖಾಸಗಿ ರೇಷ್ಮೆಗೂಡು ಮಂಡಿಗಳು ಆರಂಭವಾಗಿರುವುದು, ಕೆಲ ರೈತರು ನೇರವಾಗಿ ರೀಲರುಗಳ ಮನೆಗೆ ಗೂಡು ಕೊಂಡೊಯ್ದು ಮಾರಾಟ ಮಾಡುವುದು ಸೇರಿದಂತೆ ಹಲವು ಕಾರಣಗಳಿಂದ ಮಾರುಕಟ್ಟೆಯಲ್ಲಿ ವಹಿವಾಟು ದಿನ ದಿನಕ್ಕೂ ಕುಸಿಯುತ್ತಿದೆ ಎಂದರು. ಮಾರುಕಟ್ಟೆ ಹೊರಗೆ ಗೂಡು ಖರೀದಿಸುವವರನ್ನು ಅಲ್ಲಿಂದ ಹೊರ ಹಾಕಬೇಕು. ರೈತರೂ 10, 20 ರೂಪಾಯಿಗಳಿಗೆ ಆಸೆ ಬಿದ್ದು ಖಾಸಗಿ ರೇಷ್ಮೆ ಮಂಡಿಗೆ ಗೂಡು ಹಾಕುವುದನ್ನು ಬಿಡಬೇಕು. ರೀಲರುಗಳ ಮನೆಗೆ ಹೋಗಿ ಗೂಡು ಮಾರಾಟ ಮಾಡುವ ಪರಿಪಾಠ ಬಿಡಬೇಕೆಂಬ ಸಲಹೆ ಸೂಚನೆಗಳು ಸಭೆಯಲ್ಲಿ ವ್ಯಕ್ತವಾದವು. ರೈತ ಸಂಘದ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಬಿ.ನಾರಾಯಣಸ್ವಾಮಿ, ಗೋಪಾಲಗೌಡ, ಸುರೇಶ್, ರೀಲರುಗಳಾದ ಅನ್ಸರ್‌ಖಾನ್, ರಾಮಕೃಷ್ಣ, ಆನಂದ್, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.
ಖಾಸಗಿ ಮಂಡಿಗೆ ಆಕ್ಷೇಪ: ವಹಿವಾಟಿಗೆ ಬರುವ ಗೂಡಿನ ಪ್ರಮಾಣ ಹೆಚ್ಚಿಸಿ ರೀಲರುಗಳು ಹಾಗೂ ರೈತರನ್ನು ಉಳಿಸುವ ಬಗ್ಗೆ ಚರ್ಚಿಸಲಾಯಿತು. ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ಮಾರ್ಗದ ಜಾತವಾರ ಬಳಿ ಈಗಾಗಲೆ ಖಾಸಗಿ ರೇಷ್ಮೆ ಮಂಡಿ ಆರಂಭವಾಗಿದ್ದು, ಶಿಡ್ಲಘಟ್ಟದಲ್ಲಿ ಮತ್ತೊಂದು ಅಂತಹ ಖಾಸಗಿ ರೇಷ್ಮೆ ಮಂಡಿ ಆರಂಭಿಸಲು ಸಿದ್ಧತೆಗಳು ನಡೆದಿವೆ. ಅದನ್ನು ಕೂಡಲೆ ಸ್ಥಗಿತಗೊಳಿಸಲು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಹಾಗೂ ರೀಲರ್‌ಗಳು ಆಗ್ರಹಿಸಿದರು.