ಚಿತ್ರದುರ್ಗ: ರೇಷ್ಮೆ ಬೆಳೆಗಾರರ ಹಿತ ಕಾಪಾಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ನೂರಾರು ರೇಷ್ಮೆ ಬೆಳೆಗಾರರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ರೈತರು, ನ್ಯಾಯಯುತ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಮೂಲಕ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ವ್ಯಾಪಕವಾಗಿ ರೇಷ್ಮೆ ಕೃಷಿಯನ್ನು ಕೈಗೊಳ್ಳಲಾಗಿದೆ. ಅತ್ಯಂತ ಸೂಕ್ಷ್ಮ ಬೆಳೆಯಾದ ಕಾರಣ ವೈಜ್ಞಾನಿಕ ಕ್ರಮ ಅನುಸರಿಸಿ ಜೋಪಾನವಾಗಿ ರಕ್ಷಿಸಬೇಕಿದೆ. ಈವರೆಗೂ ಬೈವೋಲ್ಟಿನ್ ತಳಿ ಬೆಳೆ ಪ್ರತಿ ಕೆ.ಜಿ.ಗೆ 800 ರೂ. ಇದ್ದು, ಕೇಂದ್ರ ಸರ್ಕಾರ ಚೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ನೂಲು ಆಮದು ಮಾಡಿಕೊಂಡ ಪರಿಣಾಮ ಬೆಲೆ ಕುಸಿತ ಕಂಡಿದೆ.
ಹೀಗಾಗಿ ರೇಷ್ಮೆಗೂಡಿಗೆ ಸ್ಥಳೀಯವಾಗಿ ಹೆಚ್ಚಿನ ಬೆಲೆ ಸಿಗುತ್ತಿಲ್ಲ. ಇದರಿಂದ ಬೆಳೆಗಾರರು ಕಂಗಾಲಾಗಿದ್ದು, ಉತ್ಪಾದನಾ ವೆಚ್ಚ ಅಧಿಕವಾದ ಕಾರಣ ರೇಷ್ಮೆ ಬೆಳೆಯನ್ನು ಕೈಬಿಡುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಬೆಳೆಗಾರರ ರಕ್ಷಣೆಗೆ ನಿಲ್ಲಬೇಕು ಎಂದು ಆಗ್ರಹಿಸಿದರು.
ರೇಷ್ಮೆಗೂಡಿನ ದರ ತೀವ್ರ ಕುಸಿತ ಕಂಡಿದ್ದು, 1 ಕೆ.ಜಿಗೆ 800 ರೂ.ನಂತೆ ನಿಗದಿಪಡಿಸಿ ಖರೀದಿಸಬೇಕು. ಚಾಕಿ ಹುಳುವಿನ ದರ ಏರಿಕೆಯಾಗಿದ್ದು, ಅದನ್ನು ಕಡಿಮೆಗೊಳಿಸಿ, ರೈತರಿಗೆ ಸಬ್ಸಿಡಿ ದರದಲ್ಲಿ ಹುಳುಗಳನ್ನು ವಿತರಿಸಬೇಕು. ಅಲ್ಲದೆ, ಚಾಕಿ ಕೇಂದ್ರಗಳ ಗುಣಮಟ್ಟ ರಕ್ಷಣೆಗೆ ರೇಷ್ಮೆ ಇಲಾಖೆ ನಿಗವಹಿಸಬೇಕು ಎಂದು ಒತ್ತಾಯಿಸಿದರು.
ರೇಷ್ಮೆಗೂಡಿಗೆ ಪ್ರತಿ ಕೆ.ಜಿ.ಗೆ 50 ರೂ. ಇದ್ದಂತ ಪ್ರೋತ್ಸಾಹ ಧನ ನಿಲ್ಲಿಸಲಾಗಿದೆ. ಕೂಡಲೇ ಪುನರಾರಂಭಿಸಿ ಅದನ್ನು 200 ರೂ.ಗೆ ಹೆಚ್ಚಿಸಬೇಕು. ಸಾಗಾಣಿಕೆ ವೆಚ್ಚವನ್ನು ಬೇರೆ ಜಿಲ್ಲೆಗಳಂತೆ ಚಿತ್ರದುರ್ಗ ಜಿಲ್ಲೆಗೂ ವಿಸ್ತರಿಸಬೇಕು. ರೇಷ್ಮೆ ಹುಳುವಿನ ಸಾಕಾಣಿಕೆ ಮನೆ ನಿರ್ಮಿಸಲು ಸದ್ಯ 3 ಲಕ್ಷ ರೂ. ಸಹಾಯಧನ ನೀಡುತ್ತಿದ್ದು, ಅಗತ್ಯ ವಸ್ತುಗಳು ಮತ್ತು ನಿರ್ಮಾಣ ವೆಚ್ಚ ಅಧಿಕವಿರುವ ಕಾರಣ 6 ಲಕ್ಷ ರೂ.ಗೆ ಏರಿಕೆ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ತಾಲೂಕಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಪದಾಧಿಕಾರಿಗಳಾದ ಕೆ.ಪಿ.ಭೂತಯ್ಯ, ಮಂಜಪ್ಪ ಶಿವನಕೆರೆ, ಸಿ.ನಾಗರಾಜು ಮುದ್ದಾಪುರ, ಎಸ್.ಟಿ.ಚಂದ್ರಪ್ಪ, ಮಕ್ಲಹಳ್ಳಿ ರವಿಕುಮಾರ್, ಎಂ.ಬಿ.ತಿಪ್ಪೇಸ್ವಾಮಿ, ಮಹಂತಣ್ಣ, ಶಾಂತಣ್ಣ, ಮಲ್ಲಿಕಾರ್ಜುನ್ ಇತರರಿದ್ದರು.