oppo_2 
ಜಿಲ್ಲೆ

ರೇಷ್ಮೆ ಗೂಡು ಮಾರುಕಟ್ಟೆ ಅಪೂರ್ಣ

ಕಲಬುರಗಿ: ನಗರದ ಡಬರಾಬಾದ್ ಕ್ರಾಸ್‌ನಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿಸುತ್ತಿರುವ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆಯ ಕಾಮಗಾರಿಯನ್ನು ವಿಳಂಬ ಮಾಡುತ್ತಿದ್ದು, ಶೀಘ್ರ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಹೈಕ ಭೋವಿ ಜನಸೇವಾ ಸಂಘದ ಅಧ್ಯಕ್ಷ ಭಗವಾನ್ ಭೋವಿ ಆಗ್ರಹಿಸಿದರು.
ಮಾರುಕಟ್ಟೆಗೆ ನಾಲ್ಕು ಎಕರೆ ಜಮೀನು ಮಂಜೂರಾಗಿದೆ. ಇದು ರಾಮನಗರ ಮಾರುಕಟ್ಟೆಗಿಂತ ಬೃಹತ್ ಯೋಜನೆ ಆಗಿದೆ. ಆದರೆ ಮಾರುಕಟ್ಟೆಯ ಜಮೀನಿನಲ್ಲಿ ಕೆಲವರು ಭೂಮಿಯನ್ನು ಕಬ್ಜಾ ಮಾಡಿಕೊಂಡಿದ್ದಾರೆ. ಕಾಮಗಾರಿ ವಿಳಂಬದಿAದ ಇಡೀ ಯೋಜನೆಯೇ ಹಾಳಾಗುವ ಭೀತಿ ಇದ್ದು, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ, ವೇಗ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
೧೫ ಕೋಟಿ ರೂ.ನಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸಬೇಕು. ಅದಕ್ಕೆ ೧೮ ತಿಂಗಳಲ್ಲಿ ಪೂರ್ಣಗೊಳಿಸಲು ಗುರಿ ನೀಡಲಾಗಿದೆ. ಆದರೆ ಇದೀಗ ೧೦ ತಿಂಗಳಾಗಿದ್ದು, ಶೇ.೨೦ರಷ್ಟು ಕೆಲಸ ಆಗಿಲ್ಲ. ಹೀಗೆ ಮುಂದುವರಿದರೆ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಇನ್ನು ಹಲವು ವರ್ಷ ಮಾರುಕಟ್ಟೆ ಕನಸಾಗಿಯೇ ಉಳಿಯಲಿದೆ. ಅಲ್ಲದೆ ಯೋಜನೆ ಹಾಳಾಗಲಿದೆ. ಆದ್ದರಿಂದ ಕೂಡಲೇ ಪ್ರಸ್ತುತ ಟೆಂಡರ್ ರದ್ದುಪಡಿಸಿ, ಬೇರೆಯವರಿಗೆ ಟೆಂಡರ್ ನೀಡಬೇಕು ಎಂದು ಆಗ್ರಹಿಸಿದರು.
ಕಾಮಗಾರಿ ಕುರಿತು ಮಾಹಿತಿ ತೆಗೆದುಕೊಳ್ಳಲು ಹೋದರೆ ಯಾರೊಬ್ಬರೂ ಉತ್ತರಿಸುತ್ತಿಲ್ಲ. ಡಿಸಿ, ರೇಷ್ಮೆ ಮಂಡಳಿ ಅಧ್ಯಕ್ಷೆ, ಗುತ್ತಿಗೆದಾರ ಎಲ್ಲವರೂ ನಮ್ಮವರೇ ಇದ್ದಾರೆ. ಏನು ಮಾಡಿಕೊಳ್ಳಲು ಆಗಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕೂಡಲೇ ಪ್ರಸ್ತುತ ಇರುವ ಗುತ್ತಿಗೆದಾರನ ಟೆಂಡರ್ ರದ್ದು ಮಾಡಬೇಕು, ಅಧಿಕಾರಿಗಳು ಪರಿಶೀಲಿಸಿ, ಕಾಮಗಾರಿಗೆ ವೇಗ ನೀಡಬೇಕು, ಮಾರುಕಟ್ಟೆ ಬಳಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು ಎಂದು ಆಗ್ರಹಿಸಿದರು.
೬೦ ದಿನದಲ್ಲಿ ಮಾರುಕಟ್ಟೆ ಕುರಿತು ಕ್ರಮ ಕೈಗೊಳ್ಳದಿದ್ದರೆ ನವೆಂಬರ್ ೨೫ರಂದು ಮಾರುಕಟ್ಟೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಮುಖರಾದ ಬಸವರಾಜ ಸಂಗೊಳ್ಳಿ, ಶರಣು ಸಜ್ಜನ, ಸುಭಾಷ ಭೋವಿ, ನಜೀರ್‌ಸಾಬ್ ಜೇವರ್ಗಿ, ದ್ಯಾವಪ್ಪ ಸುಬೇದಾರ, ಮಲ್ಲಣಗೌಡ ಪಾಟೀಲ್ ಇತರರಿದ್ದರು.