ಚಿತ್ರದುರ್ಗ: ರೇಷ್ಮೆ ಕೃಷಿ ಉತ್ಪಾದನೆಯಲ್ಲಿ ದೇಶದಲ್ಲೇ ರಾಜ್ಯಮೊದಲಿನಿಂದಲೂ ಪ್ರಥಮ ಸ್ಥಾನದಲ್ಲಿದೆ ಎಂದು ಬೆಂಗಳೂರು ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ‌್ಯದರ್ಶಿ ಪಿ.ಶಿವಕುಮಾರ್ ಹೇಳಿದರು.
ಕೇಂದ್ರ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ, ಜವಳಿ ಸಚಿವಾಲಯ ಮತ್ತು ರೇಷ್ಮೆ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಎಸ್‌ಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ‘ರೇಷ್ಮೆ ಕೃಷಿ-ಐಸಿರಿಗೆ ದಾರಿ’ ರೇಷ್ಮೆ ಕೃಷಿ ಮೇಳದಲ್ಲಿ ಮಾತನಾಡಿದರು.
ದೇಶದ ವಿವಿಧೆಡೆ ರೇಷ್ಮೆ ಕೃಷಿ ಗಮನಿಸಲು ಮಂಡಳಿ ಸ್ಥಾಪನೆಯಾಯಿತು. ಇದು ಆರಂಭವಾದಾಗ ಜಾಗತಿಕವಾಗಿದ್ದ ಭಾರತದ ಶೇ.6 ರೇಷ್ಮೆ ಉತ್ಪಾದನೆ ಇಂದು ಶೇ.42ಕ್ಕೆ ಏರಿಕೆ ಆಗಿದೆ. ಇದಕ್ಕೆ ರೈತರು ಹಾಗೂ ಕಾರ್ಮಿಕರ ಪರಿಶ್ರಮ ಕಾರಣವಾಗಿದೆ. ದೇಶದ 25 ಕ್ಕೂ ಹೆಚ್ಚು ರಾಜ್ಯಗಳಲ್ಲಿ ರೇಷ್ಮೆ ಕೃಷಿ, ಕಾರ‌್ಯಗಳು ನಡೆಯುತ್ತಿದ್ದು, ಕರ್ನಾಟಕ ನಂ.1 ಸ್ಥಾನದಲ್ಲಿ ಮುಂದುವರಿದಿದೆ ಎಂದರು.
ಕೇಂದ್ರ ರೇಷ್ಮೆ ಮಂಡಳಿ ದೇಶಾದಾದ್ಯಂತ 159 ಶಾಖೆ ಹಾಗೂ ವಿಸ್ತರಣಾ ಶಾಖೆಗಳನ್ನು ಹೊಂದಿದೆ. ಇದರಲ್ಲಿ 28 ಕರ್ನಾಟಕದಲ್ಲಿವೆ. ಬಹಳಷ್ಟು ವಿಜ್ಞಾನಿಗಳು ರಾಜ್ಯದವರೇ ಇದ್ದಾರೆ. ವಿಶ್ವದ ರೇಷ್ಮೆ ಮಾರುಕಟ್ಟೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. 2030ರ ವೇಳೆಗೆ ಭಾರತದಲ್ಲಿ ಶೇ.50 ರೇಷ್ಮೆ ಉತ್ಪಾದಿಸುವ ಮೂಲಕ ಚೀನಾವನ್ನು ಹಿಂದಿಕ್ಕಬೇಕಿದೆ. ಈ ನಿಟ್ಟಿನಲ್ಲಿ ರೈತರ ಸಮಸ್ಯೆ ಪರಿಹರಿಸಲು ಹಾಗೂ ಆರ್ಥಿಕ ನೆರವಿಗೆ ರೇಷ್ಮೆ ಮಂಡಳಿ ಸದಾ ಸಿದ್ಧ್ದವಿದೆ ಎಂದು ಹೇಳಿದರು.
ಸ್ವಯಂಚಾಲಿತ ರೇಷ್ಮೆ ನೂಲಿನ ಯಂತ್ರ ಖರೀದಿಗೆ ಕೇಂದ್ರ ಶೇ.50 ಹಾಗೂ ರಾಜ್ಯಸರ್ಕಾರದಿಂದ ಶೇ.25 ಸಹಾಯಧನವಿದೆ. ಆದರೆ ಇದರ ಮೇಲಿನ ಜಿಎಸ್‌ಟಿಯನ್ನು ರೇಷ್ಮೆ ಕೆಲಸಗಾರರು ಭರಿಸಬೇಕಿದೆ ಎಂಬ ಅಳಲಿದ್ದು, ಮುಂಬರುವ ದಿನಗಳಲ್ಲಿ ಈ ಯಂತ್ರ ಖರೀದಿಗೆ ಜಿಎಸ್‌ಟಿ ವಿನಾಯಿತಿ ಸಿಗಲಿದೆ ಎಂದು ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ ರಾಘವೇಂದ್ರ ಮಾತನಾಡಿ, ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಬೆಳೆ ಪಡೆದು ಆದರ್ಶ ಕೃಷಿಕರಾಗುವಂತೆ ರೈತರಿಗೆ ಮನವಿ ಮಾಡಿದರು.
ರೇಷ್ಮೆ ಕೃಷಿ ಇಲಾಖೆ ಹೆಚ್ಚುವರಿ ನಿರ್ದೇಶಕ ವೈ.ಟಿ.ತಿಮ್ಮಯ್ಯ ಮಾತನಾಡಿದರು. ಮೇಳದ ಅಂಗವಾಗಿ ರೇಷ್ಮೆ ಕೃಷಿ ವಸ್ತು ಪ್ರದರ್ಶನ, ತಂತ್ರಜ್ಞಾನ, ಕಿರುಪುಸ್ತಕಗಳು ಮತ್ತು ಕಿರುಹೊತ್ತಗೆಗಳನ್ನು ಬಿಡುಗಡೆ ಮಾಡಲಾಯಿತು. ವಿಜ್ಞಾನಿಗಳೊಂದಿಗೆ ರೈತರ ಸಂವಾದ ನಡೆಯಿತು.
ಮೈಸೂರಿನ ಸಿಎಸ್‌ಬಿ-ಸಿಎಸ್‌ಆರ್‌ಟಿಐ ನಿರ್ದೇಶಕ ಡಾ.ಎಸ್.ಗಾಂಧಿದಾಸ್, ಡಾ.ಎಲ್.ಕುಸುಮ, ಡಾ.ಭಾಗ್ಯ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಮಾರಪ್ಪ ಬೀರಲದಿನ್ನಿ, ಮಲ್ಲಾಡಿಹಳ್ಳಿ ಅಮೃತ್ ಆರ್ಗ್ಯನಿಕ್ ಫರ್ಟಿಲೈಜರ್ ಎಂಡಿ ಕೆ.ನಾಗರಾಜ್, ಪ್ರಗತಿಪರ ಕೃಷಿಕ ಡಾ.ವೀರಭದ್ರಪ್ಪ ಮತ್ತಿತರರು ಇದ್ದರು.