ಅರಕಲಗೂಡು: ರೇಷ್ಮೆ ಕೃಷಿ ಲಾಭದಾಯಕ ಬೆಳೆಯಾಗಿದ್ದು, ರೈತರು ಬೆಳೆ ವಿಸ್ತೀರ್ಣ ಹೆಚ್ಚಿಸಿ ಆರ್ಥಿಕವಾಗಿ ಉನ್ನತಿ ಹೊಂದಬೇಕು ಎಂದು ಶಾಸಕ ಎ. ಮಂಜು ತಿಳಿಸಿದರು.
ತಾಲೂಕಿನ ದುಮ್ಮಿ ಕೊಪ್ಪಲು ಗ್ರಾಮದ ಮಾರಮ್ಮ ದೇವಸ್ಥಾನ ಆವರಣದಲ್ಲಿ ರೇಷ್ಮೆ ಇಲಾಖೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ರೇಷ್ಮೆ ಕೃಷಿ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ 700ಕ್ಕೂ ಅಧಿಕ ಮಂದಿ ರೇಷ್ಮೆ ಬೆಳೆಗಾರರು ಇದ್ದು, ಯಾರೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿಲ್ಲ. ಭೂಮಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ದೊರೆಯುತ್ತದೆ ಎಂದರು.
ರೇಷ್ಮೆ ಬೆಳೆಗೆ ರೋಗ ಕಾಣಿಸಿಕೊಂಡು ಕೆಲವು ರೈತರ ಬೆಳೆ ಹಾನಿಗೊಳಗಾಗಿದೆ. ರೇಷ್ಮೆ ಬೆಳೆಗೆ ರೋಗ ಬರುವುದು ವಿರಳ. ಈ ಬಾರಿ ರೋಗಭಾದೆಯಿಂದ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಲಾಖೆ ಅಧಿಕಾರಿಗಳು, ತಜ್ಞರು ಬೆಳೆಗಳ ವೀಕ್ಷಣೆ ಮಾಡಿ ಸಲಹೆ ನೀಡಬೇಕಿದೆ. ತಾಲೂಕಿನಲ್ಲಿ ರೇಷ್ಮೆ ಬೆಳೆ ಕೈಗೊಳ್ಳಲು ಸೂಕ್ತ ವಾತವರಣ ಇದೆ. ಹೆಚ್ಚು ರೇಷ್ಮೆ ಬೆಳೆ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಸರ್ಕಾರದಿಂದ ಹೆಚ್ಚಿನ ಸಹಾಯಧನ ಎಲ್ಲ್ಲ ವರ್ಗದವರಿಗೂ ದೊರೆಯುತ್ತದೆ. ರೇಷ್ಮೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಈ ಕಡೆ ಗಮನಕೊಡಬೇಕೆಂದು ಸಲಹೆ ನೀಡಿದರು.
ವಿಜ್ಞಾನಿ ಡಾ.ದಯಾನಂದ ಮಾತನಾಡಿ, ರೈತರು ಸಂಪ್ರದಾಯ ಪದ್ಧತಿಯಲ್ಲಿನ ಕೃಷಿ ಕ್ರಮವನ್ನು ದೂರ ಮಾಡಬೇಕಿದೆ. ವೈಜ್ಞಾನಿಕವಾಗಿ ಬೆಳೆ ಕೈಗೊಂಡಾಗ ರೋಗಮುಕ್ತ ಹಾಗೂ ಉತ್ತಮ ಬೆಲೆಯನ್ನು ಪಡೆಯಬಹುದಾಗಿದೆ. ಈಗ ಕಾಣಿಸಿಕೊಳ್ಳುತ್ತಿರುವ ರೋಗ ಕುರಿತು ಆತಂಕಪಡುವ ಅಗತ್ಯವಿಲ್ಲ. ಸೂಕ್ತ ಮಾರ್ಗದರ್ಶನ ಪಡೆದು ಕೃಷಿಯನ್ನು ಕೈಗೊಳ್ಳಿ ಎಂದು ತಿಳಿಸಿದರು.
ರೇಷ್ಮೆ ಇಲಾಖೆ ಉಪ ನಿರ್ದೇಶಕ ಎ.ಅಣ್ಣಾಜೀರಾವ್ ಮಾತನಾಡಿ, ಇಲಾಖೆ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳು ರೇಷ್ಮೆ ಬೆಳೆಗಾರರಿಗೆ ದೊರೆಯುತ್ತಿದೆ. ಬೆಳೆ ಕೈಗೊಳ್ಳುವ ಮುನ್ನವೇ ವೈಜ್ಞಾನಿಕ ಪದ್ಧತಿ ಅನುಸರಿಸಬೇಕು. ಜತೆಗೆ ಬಿತ್ತನೆ ಮರಿಗಳನ್ನು ಪಡೆಯುವಾಗ ಎಚ್ಚರಿಕೆ ವಹಿಸಬೇಕಿದೆ. ಒಂದು ಬೆಳೆ ಕಳೆದುಕೊಂಡರೆ ಮತ್ತೊಂದು ಬೆಳೆ ಕೈಹಿಡಿಯುವುದಿಲ್ಲ. ಪ್ರತಿ ಬೆಳೆಯಲ್ಲಿಯೂ ಆದಾಯ ಹೊಂದುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದರು.
ರೇಷ್ಮೆ ಇಲಾಖೆ ಅಧಿಕಾರಿಗಳಾದ ನಾಗೇಂದ್ರಪ್ಪ, ಶೈಲಾ, ನಟರಾಜ್, ಸೀತಾರಾಮ, ಗ್ರಾಪಂ ಅಧ್ಯಕ್ಷೆ ಕವಿತಾ, ಬೆಳೆಗಾರರು ಇದ್ದರು.