ಮೈಸೂರು: ರೇಷ್ಮೆ ಉದ್ಯಮವನ್ನು ಪ್ರೋತ್ಸಾಹಿಸಲು ಮುಂದಿನ ದಿನಗಳಲ್ಲಿ ದುಪ್ಪಟ್ಟು ಬೆಳೆ ಬೆಳೆಯುವ ಗುರಿ ಹೊಂದಿರುವುದಾಗಿ ರೇಷ್ಮೆ ಮತ್ತು ಪಶು ಸಂಗೋಪನೆ ಇಲಾಖೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ನಗರದ ಕೆಎಸ್‌ಐಸಿ ಆವರಣದಲ್ಲಿ ರೇಷ್ಮೆ ನೇಯ್ಗೆ ಕಾರ್ಖಾನೆಗೆ ಬುಧವಾರ ಭೇಡಿ ನೀಡಿದ ಸಚಿವರು, ಅಲ್ಲಿಯ ಕಾರ್ಯವೈಖರಿಯನ್ನು ವೀಕ್ಷಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಸರ್ಕಾರದಿಂದ ಮುಂದಿನ ದಿನಗಳಲ್ಲಿ ಉತ್ತಮವಾದ ರೇಷ್ಮೆ ಬೆಳೆ ಬೆಳೆಯಲು ಸಹಾಯಕವಾಗುವಂತಹ ಯೋಜನೆಗಳನ್ನು ರೂಪಿಸಲಾಗುವುದು. ರೈತರಿಂದ ನೇರವಾಗಿ ಉತ್ತಮ ಬೆಲೆಯನ್ನು ನೀಡಿ ರೇಷ್ಮೆಯನ್ನು ಖರೀದಿಸಿ, ರೈತರ ಆರ್ಥಿಕ ಸಂಕಷ್ಟಕ್ಕೆ ನೆರವಾಗುವ ರೀತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಮೈಸೂರು ಸಿಲ್ಕ್ ಉದ್ಯಮಕ್ಕೆ ಹೆಸರು ವಾಸಿಯಾಗಿರುವ ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ಕರ್ನಾಟಕ ಸಿಲ್ಕ್ ಕಾರ್ಪೊರೇಷನ್ (ಕೆಎಸ್‌ಐಸಿ) ಮಳಿಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲಾಗುವುದು. ಪ್ರೇಕ್ಷಣೀಯ ಸ್ಥಳಗಳಲ್ಲಿ ಹೆಚ್ಚಿನ ಮಳಿಗೆೆಗಳನ್ನು ತೆರೆದು ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುವುದು. ಕಾರ್ಖಾನೆಗಳಲ್ಲಿ ಉತ್ಪನ್ನಗಳ ಹೆಚ್ಚಳಕ್ಕಾಗಿ ವಿವಿಧ ರೀತಿಯ ಉತ್ತಮ ಉಪಕರಣಗಳನ್ನು ಅಳವಡಿಸಿ, ಕಾರ್ಖಾನೆಗಳಲ್ಲಿನ ಕಾರ್ಯವೈಖರಿಯನ್ನು ವೃದ್ಧಿಸಲಾಗುವುದು ಎಂದರು.
2022ನೇ ಸಾಲಿನಲ್ಲಿ ಕಾರ್ಖಾನೆಯಲ್ಲಿ ಒಟ್ಟು 4.5 ಲಕ್ಷ ಮೀಟರ್ ರೇಷ್ಮೆ ಉತ್ಪನ್ನಗಳನ್ನು ತಯಾರಿಸಲಾಗಿತ್ತು. ಕಳೆದ ಸಾಲಿನಲ್ಲಿ 200 ಕೋಟಿಯಷ್ಟು ಆದಾಯ ಬಂದಿದೆ. 2023ನೇ ಸಾಲಿನಲ್ಲಿ 1 ಲಕ್ಷ ಮೀಟರ್ ರೇಷ್ಮೆ ಉತ್ಪನ್ನಗಳು ಹೆಚ್ಚಳಗೊಂಡಿದ್ದು, ಈ ಬಾರಿ 240 ಕೋಟಿ ರೂ. ಆದಾಯ ಗಳಿಸಿದೆ. ಈ ವರ್ಷ ಇನ್ನೂ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಕಾರ್ಖಾನೆಗಳಲ್ಲಿನ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರದ ನಿಯಮಾವಳಿಗಳಂತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು. ಉತ್ತಮ ಯಂತ್ರೋಪಕರಣಗಳನ್ನು ಕಾರ್ಖಾನೆಗೆ ಒದಗಿಸಲಾಗುವುದು ಹಾಗೂ ನೌಕರರು ರೇಷ್ಮೆ ನೇಯ್ಗೆಯಲ್ಲಿ ಉತ್ತಮ ಕೌಶಲ್ಯ ಅಳವಡಿಸಿಕೊಂಡು ಉತ್ಪಾದನೆ, ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ತಿಳಿಸಲಾಗಿದೆ ಎಂದರು.
ಸರ್ಕಾರಕ್ಕೆ ಅಭದ್ರತೆ ಇಲ್ಲ:
ಹಲವು ವರ್ಷಗಳ ಬಳಿಕ 136 ಶಾಸಕರ ಬೆಂಬಲದಿಂದ ರಚನೆಯಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಅಭದ್ರತೆ ಇಲ್ಲ. ಶಾಸಕರಲ್ಲಿ ಕೆಲ ಅಸಮಧಾನ ಇರುವುದು ಸಹಜ. ಎಲ್ಲವನ್ನು ಸರಿ ಪಡಿಸಿಕೊಂಡು ಹೋಗಲಾಗುವುದು. ಕಾಂಗ್ರೆಸ್ ಜನಪ್ರಿಯ ಕಾರ್ಯಕ್ರಮ ಸಹಿಸದೆ ಬಿಜೆಪಿ ಇಲ್ಲ, ಸಲ್ಲದ ಅಪಪ್ರಚಾರ ಮಾಡುತ್ತಿದೆ ಎಂದು ಟೀಕಿಸಿದರು.
ಡಿ.ಜೆ. ಹಳ್ಳಿ, ಕೆ.ಜೆ.ಹಳ್ಳಿಗೆ ಸಂಬಂಧಿಸಿದಂತೆ ಶಾಸಕ ತನ್ವೀರ್‌ಸೇಠ್ ಅವರು ತಮ್ಮ ಅಭಿಪ್ರಾಯ ತಿಳಿದ್ದು, ಆರೋಪಿಗಳ ಮೇಲಿನ ಆರೋಪದ ಸತ್ಯಾಸತ್ಯತೆ ಪರಿಶೀಲಿಸುವಂತೆ ಹೇಳಿದ್ದಾರೆ. ಸಂಬಂಧಪಟ್ಟ ಸಚಿವರು ಸೂಕ್ತ ಕ್ರಮಕೈಗೊಳ್ಳಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.