ಮೈಸೂರು: ಜಾತ್ಯತೀತ ಜನತಾದಳದ 100 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಆದರೆ ಪಟ್ಟಿ ಬಿಡುಗಡೆಗೆ ರೇವಣ್ಣ ಅವರು ಕಾಲ ಸೂಕ್ತವಾಗಿಲ್ಲವೆಂದು ತಕರಾರು ತೆಗೆದಿದ್ದಾರೆ. ಹಾಗಾಗಿ, ಬಿಡುಗಡೆ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಂಚರತ್ನ ಯಾತ್ರೆ ಅಂಗವಾಗಿ ಚಾಮುಂಡಿಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅವರು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಎಚ್.ಡಿ.ರೇವಣ್ಣ ನಮ್ಮ ಪಕ್ಷದ ಜ್ಯೋತಿಷಿ. ಜೆಡಿಎಸ್‌ನ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಶುಕ್ರವಾರ ಸಮಯ ಪ್ರಸಕ್ತವಾಗಿಲ್ಲವೆಂದು ಅವರು ತಕರಾರು ತೆಗೆದಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಎಚ್.ಡಿ ದೇವೇಗೌಡರ ನೇತೃತ್ವದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.
ಕೇಂದ್ರದಿಂದ ನಿರ್ಲಕ್ಷೃ:
ರಾಷ್ಟ್ರೀಯ ಪಕ್ಷಗಳು ರಾಜ್ಯದ ಪಾಲಿಗೆ ಮಾರಕ ಎನ್ನುವುದು ಪದೇ ಪದೆ ಸಾಬೀತಾಗಿದೆ. ಪಿನಾಕಿನಿ ನದಿಯ ವಿಚಾರವಾಗಿ ತಕರಾರು ಶುರುವಾಗಿದೆ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ನಿರ್ಲಕ್ಷ್ಯ ತೋರಿದೆ. ನೀರಾವರಿ ವಿಚಾರವಾಗಿ ತೊಂದರೆಯಾಗಿದೆ. ಮೇಕೆದಾಟು ಯೋಜನೆಗೆ ಮೂರೂವರೆ ವರ್ಷದ ಹಿಂದೆಯೇ ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಈವರೆಗೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದು ಕುಮಾರಸ್ವಾಮಿ ಹರಿಹಾಯ್ದರು.
ತುಂಗಭದ್ರಾ, ಕೃಷ್ಣ ನೀರಾವರಿ ಯೋಜನೆಗಳನ್ನು ಮೇಲ್ದರ್ಜೆಗೆ ಏರಿಸುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ಕೊಡುವುದಾಗಿ ರಾಜ್ಯ ಸರ್ಕಾರ ಹೇಳುತ್ತ ಬಂದಿದೆ. ಆದರೆ ಇದುವರೆಗೂ ತೀರ್ಮಾನ ಕೈಗೊಂಡಿಲ್ಲ. 70 ವರ್ಷಗಳಿಂದಲೂ ಕರ್ನಾಟಕವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಕಡೆಗಣಿಸಿಕೊಂಡು ಬಂದಿವೆ ಎಂದು ಆರೋಪಿಸಿದರು.
ಸರ್ಕಾರದ ಮೇಲೆ ಅನುಮಾನ:
ಖಾಸಗಿ ಕಂಪನಿ ಮುಂದಿಟ್ಟಿಕೊಂಡು ಮತದಾರರ ಡೇಟಾ ಸಂಗ್ರಹ ಮಾಡಿರುವ ಕೆಲಸದಲ್ಲಿ ಸರ್ಕಾರದ ಅಧಿಕಾರಿಗಳು ಭಾಗಿಯಾಗಿದ್ದಾರೆ. ಕೆಲವು ತಪ್ಪುಗಳು ಆಗಿವೆ. ಸರ್ಕಾರಿ ನೌಕರರೆಂದು ಹೇಳಿಕೊಂಡು ಮನೆಗಳಿಗೆ ಭೇಟಿ ಕೊಟ್ಟಿರುವ ಮಾಹಿತಿ ಇದೆ. ಸರ್ಕಾರದ ನಡವಳಿಕೆ ಪ್ರತಿಯೊಬ್ಬರಲ್ಲೂ ಅನುಮಾನ ಮೂಡುಸುತ್ತಿದೆ ಎಂದು ಎಚ್‌ಡಿಕೆ ಹೇಳಿದರು.
ಇದರಿಂದ ಬಿಜೆಪಿಯವರು ದೊಡ್ಡ ಸಾಧನೆ ಮಾಡುತ್ತಾರೆ ಎಂಬ ಗಾಬರಿ ನನಗಿಲ್ಲ. ಈ ಬಾರಿ ಬಿಜೆಪಿ ಏನೇ ಮಾಡಿದರೂ ನಾಡಿನ ಜನರು ಬೇಸತ್ತು ಹೋಗಿದ್ದು, ಕುತಂತ್ರದಿಂದ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದು ಗುಡುಗಿದರು.
ಚಾಮುಂಡೇಶ್ವರಿಯಲ್ಲಿ ಪಂಚರತ್ನ ಸಮಾರೋಪ:
ಚಾಮುಂಡೇಶ್ವರಿ ಕ್ಷೇತ್ರದಲ್ಲೇ ‘ಪಂಚರತ್ನ’ ಸಮಾರೋಪ ಸಮಾರಂಭ ಮಾಡಲಾಗುವುದು. ಮಾರ್ಚ್‌ನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
123ರ ಗುರಿ ಇಟ್ಟುಕೊಂಡು ನಾವು ಹೊರಟಿದ್ದೇವೆ. ಮುಂದಿನ ದಿನಗಳಲ್ಲಿ ರಾಜಕೀಯ ಸಮೀಕರಣ ಆಗಬಹುದು. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಜನತಾ ಪರಿವಾರದಿಂದ ಹೋದವರೇ ಇದ್ದಾರೆ. ಮನಪರಿವರ್ತನೆಯಾಗಿ ಮತ್ತೆ ಪಕ್ಷಕ್ಕೆ ಬರಬಹುದು. ಬಂದಾಗ ಏನು ನಿರ್ಧಾರ ಮಾಡಬೇಕು ನೋಡೋಣ ಎಂದರು.
ಶಾಸಕರಾದ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶೆಂಪುರ, ಸಿ.ಎಸ್. ಪುಟ್ಟರಾಜು, ಅಶ್ವಿನ್‌ಕುಮಾರ್, ಪಕ್ಷದ ಮುಖಂಡರಾದ ಅಪ್ಪಾಜಿಗೌಡ, ಜಿ.ಡಿ.ಹರೀಶ್‌ಗೌಡ ಇದ್ದರು.