ಜಿಲ್ಲೆ

ರೇವಗ್ಗಿಯಲ್ಲಿ ಶ್ರೀ ರೇವಣಸಿದ್ಧೇಶ್ವರರ ರಜತ ಪಲ್ಲಕ್ಕಿ ವೈಭವ

ಕಾಳಗಿ: ಕಲ್ಯಾಣ ಕರ್ನಾಟಕದ ಆರಾಧ್ಯ ದೈವ, ಮಹಾನ್ ಶಕ್ತಿ ಪೀಠ ರೇವಗ್ಗಿ (ರಟಕಲï)ಯ ಬೆಟ್ಟದಲ್ಲಿ ಶ್ರಾವಣ ನಡುವಿನ ಸೋಮವಾರದ ನಿಮಿತ್ತ ಲಕ್ಷಾಂತರ ಭಕ್ತರ ಜೈಘೋಷದ ಮಧ್ಯೆ ಅದ್ದೂರಿಯಾಗಿ ಶ್ರೀ ರೇವಣಸಿದ್ಧೇಶ್ವರರ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಿತು.

ಬೆಳಗ್ಗೆ 3ಕ್ಕೆ ಶ್ರೀ ರೇವಣಸಿದ್ಧೇಶ್ವರ ಮೂರ್ತಿಗೆ ಕಾಕಡಾರತಿ, 4ಕ್ಕೆ ತಪೋ ಗದ್ದುಗೆಗೆ ಸಹಸ್ರ ಬಿಲ್ವಾರ್ಚನೆ, ಮಹಾಪೂಜೆ, ಮಹಾಮಂಗಳಾರತಿ ಜರುಗಿದವು. 9ಕ್ಕೆ ಗ್ರಾಮದ ಚನ್ನಬಸಪ್ಪ ದೇವರಮನಿ ಅವರ ಮನೆಯಿಂದ ಉತ್ಸವ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಬೆಡಸೂರ, ರೇವಗ್ಗಿ, ರಟಕಲ್, ಮುಕರಂಬಾ, ಕಂದಗೂಳ, ಮಾವಿನಸೂರ, ಗೊಣಗಿ ಸೇರಿ ಇನ್ನಿತರ ಹಳ್ಳಿಗಳಲ್ಲಿ ಮೆರವಣಿಗೆ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ಭಕ್ತರು ಶ್ರದ್ಧೆಯಿಂದ ಕಾಯಿ, ಕರ್ಪೂರ ಅರ್ಪಿಸಿ ಭಕ್ತಿ ಸಮರ್ಪಿಸಿದರು.

ಸಂಜೆ ದೇವಸ್ಥಾನದ ಆವರಣದಲ್ಲಿ ವಿವಿಧ ಮಠಾಧೀಶರು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ರೇವಣಸಿದ್ಧೇಶ್ವರರ ಅಲಂಕೃತ ಬೆಳ್ಳಿ ಪಲ್ಲಿಕ್ಕಿ ಉತ್ಸವ ನಡೆಯಿತು. ಸುಮಾರು ಒಂದು ತಾಸಿಗೂ ಅಧಿಕ ಸಮಯ ಉತ್ಸವ ಮೇಳೈಸಿತು. ಭಕ್ತರಿಂದ ರೇವಣಸಿದ್ಧೇಶ್ವರ ಮಹಾರಾಜ್ ಕಿ ಜೈ.. ಹರಹರ ಮಹಾದೇವ.. ಜಗದ್ಗುರುಗಳಿಗೆ ಜಯವಾಗಲಿ ಎಂಬುದು ಸೇರಿ ಹಲವು ಘೋಷಣೆಗಳು ಮೊಳಗಿದವು. ಪಲ್ಲಕ್ಕಿಗೆ ಉತ್ತತ್ತಿ, ಬಾಳೆ ಹಣ್ಣು, ಬಾದಾಮಿ, ನಾಣ್ಯ, ಪುಷ್ಪಗಳನ್ನು ಸಮರ್ಪಿಸಿದರು. ಕೆಲವು ಭಕ್ತರು ಪಲ್ಲಕ್ಕಿ ಎದರು ಉರುಳು ಸೇವೆ ಮಾಡಿ ಹರಕೆಯನ್ನು ತೀರಿಸಿದರು.

ರಟಕಲ್‌ನ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಶ್ರೀ ಸಿದ್ಧರಾಮ ಸ್ವಾಮೀಜಿ, ಶ್ರೀ ರೇವಣಸಿದ್ಧ ಶರಣರು, ನಾಗೂರಿನ ಶ್ರೀ ಅಲ್ಲಮಪ್ರಭುಲಿಂಗ ಸ್ವಾಮೀಜಿ, ಚಂದನಕೇರಾ ಶ್ರೀ, ಬೇಲೂರ ಶ್ರೀ, ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ.ಉಮೇಶ ಜಾಧವ್, ಸಹಾಯಕ ಆಯುಕ್ತರೂ ಆದ ದೇವಸ್ಥಾನ ಸಮಿತಿ ಅಧ್ಯಕ್ಷ ಆಶಪ್ಪ ಪೂಜಾರಿ, ಎಸಿ ಕಚೇರಿ ತಹಸೀಲ್ದಾರ್ ನಾಗನಾಥ ತರಗೆ, ಕಂದಾಯ ನಿರೀಕ್ಷಕ ಮಂಜುನಾಥ ಮಹಾರುದ್ರ, ಪ್ರಮುಖರಾದ ಬಸವರಾಜ ಕಠೋಳ್ಳಿ, ಹೇಮಂತ ಜಗತಾಪ, ಸಂತೋಷ ಮಾನವಿಕರ, ಮುಖಂಡರಾದ ಶಿವರಾಜ ಪಾಟೀಲ್ ಗೊಣಗಿ, ರುದ್ರಶೆಟ್ಟಿ ಗುರುಮಠಕಲ್, ಮಾಹದೇವಪ್ಪ ಭೀಮ್ಬಳ್ಳಿ, ಸಿದ್ದಯ್ಯಸ್ವಾಮಿ ಮುಕರಂಬಾ, ವೀರೇಶ ಮಠಪತಿ ಮುಕರಂಬಾ, ರೇವಣಸಿದ್ದಪ್ಪ ಚೇಂಗಟಿ, ಶಾಂತಕುಮಾರ ನಾಗೂರ, ರೇವಣಸಿದ್ದ ಬಡಾ ರಟಕಲï ಇತರರಿದ್ದರು.

ರಾಜ್ಯ ಸೇರಿ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟç ಹಾಗೂ ವಿವಿಧ ಭಾಗಗಳಿಂದ ಭಕ್ತರು ಪಾಲ್ಗೊಂಡಿದ್ದರು. ಶಹಾಬಾದ್ ಡಿವೈಎಸ್‌ಪಿ ಶೀಲವಂತ ನೇತೃತ್ವದಲ್ಲಿ ಸುಮಾರು 250ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿತ್ತು.