ಎನ್.ಆರ್.ಪುರ: ರೇಬಿಸ್ ವೈರಾಣುವಿನಿಂದ ಬರುವ ರೋಗ ಎಂದು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಪ್ರೀತಮ್ ಹೇಳಿದರು.
ಮೂಡಬಾಗಿಲು ಜ್ಞಾನ ಗಂಗೋತ್ರಿ ಶಾಲೆಯಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಹಾಗೂ ಪಶು ಇಲಾಖೆ ಆಶ್ರಯದಲ್ಲಿ ನಡೆದ ಶಾಲಾ ಮಕ್ಕಳಿಗೆ ರೇಬಿಸ್ ಕಾಯಿಲೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ, ರೇಬಿಸ್ ಕಾಯಿಲೆಗೆ ಚುಚ್ಚು ಮದ್ದು ಕಂಡು ಹಿಡಿದ ಲೂಯಿಸ್ ಪ್ಯಾಶ್ಚರ್ ಅವರು ಮರಣ ಹೊಂದಿದ ದಿನ 1985 ಸೆ.28 ಆಗಿರುವುದರಿಂದ ಅಂದು ವಿಶ್ವ ರೇಬಿಸ್ ದಿನವನ್ನಾಗಿ ಆಚರಿಸಲಾಗುವುದು ಎಂದರು.
ರೇಬಿಸ್ ಬಂದರೆ ಸಾವು ಖಚಿತ. ಆದರೆ ಕಾಯಿಲೆ ಬಾರದಂತೆ ತಡೆಗಟ್ಟಬಹುದಾಗಿದೆ. ಹುಚ್ಚು ಹಿಡಿದಿರುವ ನಾಯಿಯ ಬಾಯಿಯಲ್ಲಿ ಜೊಲ್ಲು ಸುರಿಯುತ್ತದೆ. ಎಲ್ಲರನ್ನೂ ಕಚ್ಚಲು ಮುಂದಾಗುತ್ತದೆ. ಬಿಸಿಲಿನಲ್ಲಿ ನಾಯಿಗೆ ಕಣ್ಣು ಬಿಡಲಾಗುವುದಿಲ್ಲ. ಇಂತಹ ಲಕ್ಷಣಗಳಿರುವ ನಾಯಿಗಳಿಂದ ಎಲ್ಲರೂ ದೂರವಿರಬೇಕು. ಹುಚ್ಚು ನಾಯಿ ಕಡಿದರೆ ಕೂಡಲೇ ಸರ್ಕಾರಿ ಆಸ್ಪತ್ರೆಗೆ ತೆರಳಿ ಚುಚ್ಚು ಮದ್ದನ್ನು ಪಡೆಯಬೇಕು. ಮನೆಯಲ್ಲಿ ಸಾಕಿರುವ ನಾಯಿಗಳಿಗೆ ವರ್ಷಕ್ಕೊಮ್ಮ ರೇಬಿಸ್ ಚುಚ್ಚು ಮದ್ದನ್ನು ಹಾಕಿಸಬೇಕು. ಹುಚ್ಚು ಹಿಡಿದಿರುವ ನಾಯಿಗಳು ರೋಗ ಲಕ್ಷಣ ಕಂಡುಬಂದ 15 ರಿಂದ 20 ದಿನಗಳೊಳಗೆ ಸಾಯುತ್ತವೆ ಎಂದರು.
ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಎಸ್.ಎಸ್.ಜಗದೀಶ್ ಮಾತನಾಡಿ, ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ ಎಂದರು.
ಶಾಲೆ ಮುಖ್ಯಶಿಕ್ಷಕ ಜಿ.ಎ.ಶ್ರೀಕಾಂತ್, ಪಿ.ಎಸ್.ವಿದ್ಯಾನಂದಕುಮಾರ್, ದಕ್ಷಿಣಾಮೂರ್ತಿ, ಟಿ.ಎಂ.ಶಿವಕುಮಾರ್, ಎನ್.ಟಿ.ಶೇಷಾಚಲ, ಶಿವಮೂರ್ತಿ, ಪ್ರದೀಪ್‌ಕುಮಾರ್, ಸೋಮಶೇಖರ್ ಇದ್ದರು.