ಜಿಲ್ಲೆ

ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ

ಬಾಗಲಕೋಟೆ:   ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಪಶು ಆಸ್ಪತ್ರೆಯಲ್ಲಿ ಹುಚ್ಚು ನಾಯಿ ರೋಗ ವಿರುದ್ದ ಹಮ್ಮಿಕೊಂಡ ಲಸಿಕಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿ.ಪಂ ಸಿಇಓ ಶಶಿಧರ ಕುರೇರ ಸೋಮವಾರ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಸಂಗಪ್ಪ ಅವರು ರೇಬಿಸ್ ರೋಗವು ಮಾರಣಾಂತಿಕ ರೋಗವಾಗಿದ್ದು ಹುಚ್ಚು ಪ್ರಾಣಿಗಳ ಕಡಿತದಿಂದ ಲಿಸ್ಸಾ ಎಂಬ ವೈರಾಣುವಿನಿಂದ ಹರಡುವ ಮಾರಣಾಂತಿಕ ರೋಗವಾಗಿದ್ದು ಒಮ್ಮೆ ರೋಗ ಬಂದರೆ ಸಾವು ಖಚಿತ, ಆದ್ದರಿಂದ ರೋಗ ತಡೆಗಟ್ಟುವುದು ಮೂಲ ಉದ್ದೇಶ ಆದ್ದರಿಂದ ಎಲ್ಲ ಸಾಕು ನಾಯಿಗಳಿಗೆ ರೇಬಿಸ ವಿರುದ್ದ ಲಸಿಕೆ ಹಾಕಬೇಕೆಂದು ಹಾಗೂ ಸಾರ್ವಜನಿಕರಲ್ಲಿ ರೋಗದ ಕುರಿತು ಜಾಗ್ರತೆ ಮೂಡಿಸಲು ಕರೆ ನೀಡಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ಸಾಕು ನಾಯಿ ಮಾಲಿಕರು ನಾಯಿ ಮತ್ತು ಬೆಕ್ಕು ಮರಿಗಳಿಗೆ ಮುಂಜಾಗ್ರತೆಗಾಗಿ 3 ತಿಂಗಳೊಳಗಾಗಿ ಪ್ರಥಮ ಲಸಿಕೆ, ಒಂದು ತಿಂಗಳ ನಂತರ ಬೂಸ್ಟರ್ ಲಸಿಕೆ ಹಾಕಿಸಿ ಪ್ರತಿ ವರ್ಷ ನಿಗದಿತ ದಿನದಂದು ತಪ್ಪದೇ ರೇಬಿಸ್ ಲಸಿಕೆಯನ್ನು ಹಾಕಿಸಬೇಕು. ಈ ಬಗ್ಗೆ ದೃಡೀಕರಣ ಪುಸ್ತಕ ನಿರ್ವಹಣೆಯಾಗಬೇಕು. ಯಾವುದೇ ಮಾಟ, ಮಂತ್ರ ಮತ್ತು ಮೂಡನಂಬಿಕೆಗಳಿಗೆ ಮಾರು ಹೋಗಬಾರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲಸಿಕಾ ಅಭಿಯಾನದ ಪ್ರಚಾರದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕರಡಿಗುಡ್ಡ, ಪಶು ಜಿಲ್ಲಾ ಆಸ್ಪತ್ರೆಯ ಉಪನಿರ್ದೇಶಕ ಶಿವಕುಮಾರ ಹೊಳೆಪ್ಪಗೋಳ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಆರ್.ಎಸ್.ಪದರಾ, ವೈದ್ಯಾಧಿಕಾರಿಗಳಾದ ಡಾ.ಪ್ರಶಾಂತ ಸವದಿ, ಡಾ.ಪಚ್ಚಪ್ಪನ್ನವರ, ಡಾ.ಎಸ್.ಎಚ್.ಗುಡದಿನ್ನಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಲಸಿಕಾ ಅಭಿಯಾನದಲ್ಲಿ 60 ನಾಯಿಗಳಿಗೆ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆಯನ್ನು ಹಾಕಲಾಯಿತು. ಈ ಅಭಿಯಾನ ಅಕ್ಟೋಬರ 28 ವರೆಗೆ ನಡೆಯಲಿದ್ದು, ಜಿಲ್ಲೆಯ ಎಲ್ಲ ಪಶು ವೈದ್ಯ ಸಂಸ್ಥೆಗಳಲ್ಲಿ ಲಸಿಕೆ ಹಾಕಲಾಗುತ್ತದೆ.