ಜಿಲ್ಲೆ

ರೇಣುಕಾಚಾರ್ಯರಿಂದ ಸಹಬಾಳ್ವೆ ಬೋಧಿಸುವ ಸಂದೇಶ

ಚಿತ್ರದುರ್ಗ: ಶಾಂತಿಯುತ ಸಹಬಾಳ್ವೆ ಸಮಾಜ ನಿರ್ಮಾಣಕ್ಕಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಸಂದೇಶ, ಮೌಲ್ಯಗಳು ದಾರಿದೀಪವಾಗಿವೆ ಎಂದು ಹರಿಹರ ಗಿರಿಯಮ್ಮ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಪ್ರೊ. ಗುರುಬಸವ ಹಿರೇಮಠ್ ಹೇಳಿದರು.

ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬುಧವಾರ ಡಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ‌್ಯ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ದಾನವ ಗುಣಗಳನ್ನು ಹೋಗಲಾಡಿಸಿ, ಸಹಬಾಳ್ವೆ, ಶಾಂತಿ, ಸಹನೆಯ ಎಲ್ಲ ಮಾರ್ಗಗಳನ್ನು, ಮಾನವನು ದೇವಮಾನವನಾಗುವ ಗುಣಗಳನ್ನು ನಮ್ಮೆಲ್ಲರಿಗೂ ನೀಡಿದ, ದಶಸೂತ್ರಗಳೊಂದಿಗೆ ಸರ್ವರ ಜೀವನದಲ್ಲಿ ಸರ್ವ ಕಾಲಕ್ಕೂ ಉತ್ತಮ ಯೋಗಗಳನ್ನು ಅಳವಡಿಸಿಕೊಳ್ಳಲು ಕಾರಣೀಕರ್ತರಾದ ಜಗದ್ಗುರು ರೇಣುಕಾಚಾರ‌್ಯರ ಜೀವನ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡಿದೆ.

ಅವರ ಆದರ್ಶ, ಮೌಲ್ಯಗಳು ನಮ್ಮ ಬದುಕಿಗೆ ದಾರಿದೀಪವಾಗಲಿ. ಮನುಕುಲದ ಉದ್ಧಾರಕ್ಕೆ ಸಂದೇಶಗಳನ್ನು ಸಾರಿದ ಮಹನೀಯರ ತತ್ವಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳಡಿಸಿಕೊಂಡು ಮುಂದಿನ ಪೀಳಿಗೆಗೆ ಸಂಸ್ಕೃತಿ, ಸಂಸ್ಕಾರ ಉಣಬಡಿಸುವ ಮೂಲಕ ಸನಾತನ ಪರಂಪರೆಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಕೈಜೋಡಿಸೋಣ ಎಂದರು.

ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಜಾತಿ ಸಂಕೋಲೆ ಮೀರಿ ಮಹನೀಯರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಇಂತಹ ಮಹನೀಯ ರ ಸ್ಮರಣೆ ಹಾಗೂ ಮುಂದಿನ ಪೀಳಿಗೆಗೆ ಇವರ ಕೊಡುಗೆಗಳನ್ನು ತಿಳಿಸುವ ದೃಷ್ಟಿಯಿಂದ ರಾಜ್ಯಸರ್ಕಾರ ಮಹನೀಯರ ಜಯಂತಿಗಳನ್ನು ಆಚರಿಸುತ್ತಿದೆ. ಸಮಾಜ ಮತ್ತು ಸಂಸ್ಕೃತಿ ಎರಡೂ ಒಗ್ಗೂಡಿ ಸಾಗಿದಾಗ ಮನುಕುಲಕ್ಕೆ ಉತ್ತಮ ಸಂದೇಶ ನೀಡಲು ಸಾಧ್ಯ. ಅಧ್ಯಯನದಿಂದ ಧರ್ಮದ ಸಾರ ಮತ್ತು ಸಂಸ್ಕೃತಿ ಅಳವಡಿಸಿಕೊಳ್ಳಬಹುದಾಗಿದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಶರಣರ ನಡೆ-ನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನುಡಿದಂತೆ ನಡೆಯುವ ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ, ಅಖಿಲ ಭಾರತ ವೀರಶೈವ ಸಮಾಜ ಪ್ರಧಾನ ಕಾರ‌್ಯದರ್ಶಿ ಎಂ.ಶಶಿಧರ ಬಾಬು, ಜಿಲ್ಲಾ ಜಂಗಮ ಸಮಾಜ ಅಧ್ಯಕ್ಷ ಎಂ.ಟಿ.ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ಕಾರ‌್ಯದರ್ಶಿ ಎಸ್.ಷಡಾಕ್ಷರಯ್ಯ, ಕೆ.ಎಂ.ವೀರೇಶ್, ಕೆಇಬಿ ಷಣ್ಮುಖಪ್ಪ, ಎ.ಜಿ.ಮಠದ್, ಕುಮಾರಸ್ವಾಮಿ, ಕೆ.ಸಿ.ರುದ್ರೇಶ್, ಲೀಲಾವತಿ, ಶಾಂತಲಾ, ಬಸವರಾಜ್, ಸುರೇಶ್, ವೀರೇಂದ್ರಕುಮಾರ್ ಮತ್ತಿತರ ಪ್ರಮುಖರು ಇದ್ದರು. ಕೆಪಿಎಂ ಗಣೇಶಯ್ಯ ತಂಡದವರು ಗೀತಗಾಯನ ನಡೆಸಿಕೊಟ್ಟರು.