ಜಿಲ್ಲೆ

ರೇಣುಕಾ ಬಾವಳ್ಳಿ ಅವರಿಗೆ ವಾರ್ಷಿಕ ಪ್ರಶಸ್ತಿ

ಬಳ್ಳಾರಿ : ಕಳೆದ ಹಲವು ವರ್ಷಗಳಿಂದ ರಂಗಭೂಮಿಗೆ ನಿಸ್ವಾರ್ಥ ಗುಣದಿಂದ ಸೇವೆ ಮಾಡಿದ್ದರಿಂದ ದೇವರು ಕಾಣಿಕೆಯಾಗಿ ನೀಡಿರುವ ಪ್ರಶಸ್ತಿ ಎಂದು ಪ್ರಸ್ತಕ ಸಾಲಿನ ಕರ್ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಭಾಜನರಾದ ರಂಗಭೂಮಿ ಕಲಾವಿದೆ ರೇಣುಕಾ ಬಾವಳ್ಳಿ ಮಾತುಗಳು.
ಸಂಡೂರು ತಾಲೂಕಿನ ಸುಶೀಲಾನಗರದ (ಬಾವಳ್ಳಿ) ನಿವಾಸಿ ದಾಸರ ಸಣ್ಣ ನರಸಿಂಹಪ್ಪ ಹಾಗೂ ಡಿ. ಸಿದ್ದಮ್ಮ ದಂಪತಿಯ ಪುತ್ರಿ ರಂಗಭೂಮಿ ಕಲಾವಿದೆ ರೇಣುಕಾ ಬಾವಳ್ಳಿ ಎಂಟನೇ ವಯಸ್ಸಿನಲ್ಲಿಯೇ ನಾಟ್ಯ ಮಾಡುವ ಮೂಲಕ ರಂಗಭೂಮಿಗೆ ಪ್ರವೇಶ ಮಾಡಿದ್ದಾರೆ. 11ನೇ ವಯಸ್ಸಿಗೆ ಸಂಡೂರಿನ ಬಿ.ಕೆ.ಜಿ. ನಾಗನಗೌಡ ಜತೆಯಲ್ಲಿ ‘ ಸಂಸಾರ ಜ್ಯೋತಿ ’ ಎಂಬ ನಾಟಕದಲ್ಲಿ ಪೂರ್ಣ ಪ್ರಮಾಣದ ಮಗಳ, ಹಾಸ್ಯ ಹಾಗೂ ನಾಯಕಿಯ ಪಾತ್ರಗಳಲ್ಲಿ ಅಭಿನಯಿಸಿ ಜನರಿಂದ ಚಪ್ಪಾಳೆ ಗಿಟ್ಟಿಸುವಲ್ಲಿ ಯಶ್ವಸಿಯಾಗಿದ್ದಾರೆ. ಸ್ವತಃ ನಾಟಕದ ಹಾಡುಗಳನ್ನು ಹಾಡುತ್ತಾ ಮತ್ತು ನೃತ್ಯ ಮಾಡುವ ಚತುರೆ ಎಂದು ಜನರ ಪ್ರಶಂಸೆ ಪಡೆದು ಹಾಸ್ಯಚತುರೆ ಎಂಬ ಬಿರುದು ಪಡೆದಿದ್ದಾರೆ. ಸೇಹ್ನ ಯುವ ಸಾಂಸ್ಕ್ರತಿಕ ಸಂಘದಿಂದ ಮಂತ್ರಾಲಯದಲ್ಲಿ ‘ ಕರ್ನಾಟಕ ಚೇತನ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಸುಮಾರು ಮೂರು ಸಾವಿರಕ್ಕಿಂತ ಹೆಚ್ಚು ವಿವಿಧ ಸಮಾಜದ ನಾಟಕದಲ್ಲಿ ಸತಿ ಸಂಸಾರದ ಜ್ಯೋತಿ, ರತ್ನ ಮಾಂಗಲ್ಯ, ರೈತ ನಗಲಿಲ್ಲ ಸರ್ಕಾರ ಉಳಿಲಿಲ್ಲ, ಗೌಡ್ರ ಗದ್ಲ, ಕುಡುಕ ಕಟ್ಟಿದ ತಾಳಿ, ಧನಿಕರ ದೌರ್ಜನ್ಯ, ಕೆಟ್ಟ ಮೇಲೆ ಬುದ್ದಿ ಬಂತು, ಗೌರಿ ಗೆದ್ದಳು, ಅಣ್ಣ ತಂಗಿ, ದಾರಿದೀಪ, ಶಿವರಾತ್ರಿ, ದುರಹಂಕಾರಿ, ಬಸ್ ಕಂಡಕ್ಟರ್ ಸೇರಿದಂತೆ ಮನೋಜ್ಞಾ ಅಭಿನಯದ ಮೂಲಕ ಜೂನಿಯರ್ ಮಾಲಾಶ್ರೀ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
( ಪೌರಾಣಿಕ ನಾಟಕ ) ಕಂದಗಲ್ ಹನುಮಂತರಾಯರ ಕುರುಕ್ಷೇತ್ರ, ರಕ್ತರಾತ್ರಿ, ಗುಬ್ಬಿ ಕುರುಕ್ಷೇತ್ರ, ಮಾಯಾ ಕುರುಕ್ಷೇತ್ರ, ವೀರ ಅಭಿಮನ್ಯು, ಮಹಾರಥಿ ಕರ್ಣ, ಉತ್ತರಭೂಪ, ಅಕ್ಷಯಾಂಬರ. (ಐತಿಹಾಸಿಕ ನಾಟಕ ) ಗಂಡುಗಲಿ ಕುಮಾರರಾಮ, ಸಂಗೋಳ್ಳಿ ರಾಯಣ್ಣ, ವೀರ ಸಿಂಧೂರ ಲಕ್ಷ್ಮಣ, ಕನಕಾಚಲಪತಿ ವೈಭವ. (ಆಧ್ಯಾತ್ಮಿಕ ನಾಟಕ )ಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮ, ಜಗಜ್ಯೋತಿ ಬಸವೇಶ್ವರ, ಅಯ್ದಕ್ಕಿ ಲಕ್ಕಮ್ಮ, ಅಲ್ಲಿಪುರ ಮಹಾದೇವ ತಾತ, ಗೂಳ್ಯದ ಗಾದಿಲಿಂಗಪ್ಪ ತಾತ, ಲಿಂಗನಾಯಕ ಹಳ್ಳಿ ಚನ್ನವೀರ (ಬಯಲಾಟ) ವೀರ ಅಭಿಮನ್ಯು ಕಾಳಗ( ಭೀಮನ ಪಾತ್ರದಲ್ಲಿ ) ಸೇರಿದಂತೆ ಹಲವು ನಾಟಕಗಳ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದಿದ್ದಾರೆ. ಜಿಲ್ಲೆಯ ಶಾರದ ಸಂಸ್ಥೆ, ಕಸಾಪ, ಮಾತೃಸೇವಾ ಸಂಸ್ಥೆ , ಅಭಿನಯ ಕಲಾಕೇಂದ್ರ ಸೇರಿದಂತೆ ರಾಜ್ಯದ ವಿವಿಧ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ನೀಡಿ ಗೌರವಕ್ಕೆ ಭಾಜನರಾಗಿದ್ದಾರೆ.