ಸಕಲೇಶಪುರ : ತಾಲೂಕಿನ ಹಾನುಬಾಳ್ ಹೋಬಳಿಯ ಅಚ್ಚನಹಳ್ಳಿ ಸಮೀಪ ರೆಸಾರ್ಟ್ ಮಾಲಿಕನೊರ್ವ ತನ್ನ ಸಹಚರರೊಂದಿಗೆ ಅಕ್ರಮವಾಗಿ ಸೆಕ್ಷನ್ 4 ಅಡಿ ಬರುವ ಅಭಯಾರಣ್ಯಕ್ಕೆ ಪ್ರವೇಶಿಸಿ ಕಾಡುಕುರಿಯೊಂದನ್ನು ಬೇಟೆಯಾಡಿದ ಪ್ರಕರಣ ಹೊರ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಹಾನುಬಾಳ್ ಹೋಬಳಿಯ ಬಾಳೆಕೋಲು ರೆಸಾರ್ಟ್‌ನ ಅವಿನಾಶ್, ಜೀವನ್, ಕೀರ್ತನ್ ,ಶಿಶಿರ ಎಂಬುವರು ಬುಧವಾರ ರಾತ್ರಿ ಸೆಕ್ಷನ್ 4 ಅಡಿ ಬರುವ ಶೋಲಾ ಅರಣ್ಯದಡಿ ಅಚ್ಚನಹಳ್ಳಿ ಸಮೀಪ ಕಾಡುಕುರಿಯೊಂದನ್ನು ‘ಬೇಟೆಯಾಡಿ ರೆಸಾರ್ಟ್‌ನಲ್ಲಿ ಕುರಿ ಕಡಿದು ಮಾಂಸ ಬೇಯಿಸಲು ಮುಂದಾದಾಗ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದಾಗ ಅವಿನಾಶ್, ಜೀವನ್, ಕೀರ್ತನ್ ಎಂಬುವರು ಪರಾರಿಯಾಗಿದ್ದು ಶಿಶಿರ್ ಎಂಬುವರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದಿದ್ದಾರೆ.
ಅರಣ್ಯ ಇಲಾಖೆಯವರು ಒಂದುವರೆ ಲಕ್ಷದ ಮೌಲ್ಯದ ಬಂದೂಕು, ಒಂದು ಪಿಕ್ ಅಪ್ , ಒಂದು ಆಲ್ಟೋ ಕಾರು , ಒಂದು ಬೈಕ್, ಒಂದು ಮರ ಕತ್ತರಿಸಿವ ಯಂತ್ರ ,12 ಕೆ.ಜಿ ಕುರಿ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಉಪಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಬಾಬು,ವಲಯ ಅರಣ್ಯಾಧಿಕಾರಿ ಶಿಲ್ಪ, ಉಪ ಅರಣ್ಯಾಧಿಕಾರಿಗಳಾದ ಮೋಹನ್ ಕುಮಾರ್, ವೇಣುಗೋಪಾಲ್, ಸಿಬ್ಬಂದಿಗಳಾದ ಉಮೇಶ್, ಯೋಗೇಶ್, ಮಹಾದೇವ್ ,ಮುಂತಾದವರು ಹಾಜರಿದ್ದರು.
ಹಾನುಬಾಳ್ ಹೋಬಳಿಯ ಕೆಲವು ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ಈ ರೀತಿಯ ಘಟನೆಗಳು ಪದೇ ಪದೇ ನಡೆಯುತ್ತಿದ್ದು ಅರಣ್ಯಾಧಿಕಾರಿಗಳು ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.