ಜಿಲ್ಲೆ

ರೆಡ್ ಕ್ರಾಸ್ ಸಂಸ್ಥೆ ಅವ್ಯವಹಾರ ಬೆಳಕಿಗೆ?

ವಿಜಯವಾಣಿ ಸುದ್ದಿಜಾಲ ತುಮಕೂರು

ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ತಡವಾಗಿ ಹಗರಣವೊಂದು ಬೆಳಕಿಗೆ ಬಂದಿದೆ. ಸಂಸ್ಥೆಯ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರ ವಿರುದ್ಧವೇ ನಗರ ಠಾಣೆಗೆ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ.

ಕಳೆದ 7-8 ತಿಂಗಳ ಹಿಂದೆ ಬೆಂಗಳೂರಿನ ಭಾರತೀಯ ರೆಡ್ ಕ್ರಾಸ್ ವತಿಯಿಂದ 2 ಲಕ್ಷ ಬೆಲೆಬಾಳುವ 100 ಕಿಚನ್ ವೆಸಲ್ಸ್‌ಗಳನ್ನು ನೀಡಿದ್ದು, ಇದನ್ನು ಸಂಸ್ಥೆಯ ಗಮನಕ್ಕೂ ತರದೆ ಕಾರ್ಯಕಾರಿ ಸಮಿತಿ ಸದಸ್ಯೆ ಸುಭಾಷಿಣಿ ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿರುವುದಾಗಿ ಮಾ.10 ರಂದು ಸದಸ್ಯ ಡಿ.ಬಸವರಾಜು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಸುಭಾಷಿಣಿ ವಿರುದ್ಧ ಪೂರ್ವಾಪರ ಪರಿಶೀಲಿಸದೆ ದೂರು ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸಿಇಎನ್ ಠಾಣೆಗೂ ದೂರು: ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಸಿಇಎನ್ ಠಾಣೆಗೂ ದೂರು ಬಂದಿದ್ದು, ಈ ಬಗ್ಗೆ ಮೂರು ಬಾರಿ ನೋಟಿಸ್ ನೀಡಿರುವುದು ಬಹಿರಂಗವಾಗಿದೆ. ಪರಿಶೀಲಿಸದೆ ನೋಟಿಸ್ ನೀಡಿದ್ದು ಇದರ ಹಿಂದೆ ಪೊಲೀಸರ ಮೇಲೆ ರಾಜಕೀಯ ಪ್ರಭಾವ ಬೀರಿರುವುದು ಸ್ಪಷ್ಟವಾಗಿದೆ ಎನ್ನಲಾಗಿದೆ.

ಪ್ರತಿಷ್ಠಿತ ವ್ಯಕ್ತಿಗಳೇ ಸದಸ್ಯರಾಗಿರುವ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಕೆಲ ವರ್ಷಗಳಿಂದ ನಡೆಯುತ್ತಿದ್ದ ಶೀತಲ ಸಮರ ಇದರೊಂದಿಗೆ ಬಹಿರಂಗಗೊಂಡಿದೆ.

ಅಮಾಯಕರನ್ನು ಬಲಿಪಶು ಮಾಡುವ ಯತ್ನ?

ಪ್ರತಿಷ್ಠಿತರ ನಡುವಿನ ಕಾಳಗದಲ್ಲಿ ಅಮಾಯಕರನ್ನು ಬಲಿಪಶು ಮಾಡುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಅತ್ಯಂತ ಪ್ರಾಮಾಣಿಕ ಕಳಕಳಿಯಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸುಭಾಷಿಣಿ ಅವರ ಹೆಗಲಮೇಲೆ ಬಂದೂಕವಿಟ್ಟು ಬೇರೆಯವರಿಗೆ ಗುಂಡು ಹೊಡೆಯುವ ಹುನ್ನಾರ ಈ ಪ್ರಕರಣ ಹಿಂದಿದೆ ಎಂಬ ಸತ್ಯಾಂಶ ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ.

ನಿಷ್ಠಾವಂತರು ಹೊರಕ್ಕೆ...

ರೆಡ್ ಕ್ರಾಸ್ ಸಂಸ್ಥೆಗೆ ತಮ್ಮನ್ನೇ ಸಮರ್ಪಿಸಿಕೊಂಡಿದ್ದ ಸಾಗರನಹಳ್ಳಿ ಪ್ರಭು, ಎಚ್.ಜಿ.ಚಂದ್ರಶೇಖರ್, ಕೆ.ಚಂದ್ರಣ್ಣ ಅಂತಹ ಪ್ರಾಮಾಣಿಕ, ಸಾಮಾಜಿಕ ಕಳಕಳಿಯುಳ್ಳಂತವರು ಸಂಸ್ಥೆಯಲ್ಲಿ ಗುಂಪುಗಾರಿಕೆ ವಿರೋಧಿಸಿ ಈ ಹಿಂದೆಯೇ ರಾಜೀನಾಮೆ ಕೊಟ್ಟು ಹೊರಬಂದಿದ್ದರು. ಈ ಪ್ರಕರಣ ಬೆನ್ನಲ್ಲೇ ಇನ್ನಷ್ಟು ಮಂದಿ ಕಾರ್ಯಕಾರಿ ಸಮಿತಿಗೆ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನಾದರೂ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಂಸ್ಥೆಯ ಉಳಿವಿಗೆ ಗಮನಹರಿಸಬೇಕು.