ಬಾಬುರಾವ ಯಡ್ರಾಮಿ ಕಲಬುರಗಿ: ರೆಡ್ಜೋನ್ದಲ್ಲಿರುವ ಕಲಬುರಗಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಜಿಲ್ಲಾಡಳಿತವನ್ನು ಕಂಗೆಡಿಸಿದೆ. ಇದರಿಂದಾಗಿ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದಿರುವ ಪ್ರದೇಶಗಳಲ್ಲಿ ಸೀಲ್ಡೌನ್ ಮಾಡಲು ಸಿದ್ಧತೆ ಮಾಡಲಾಗುತ್ತಿದೆ. ಇದರಿಂದಾಗಿ ಇನ್ಮುಂದೆ ಸೋಂಕಿತರು ಹೆಚ್ಚಾಗಿರುವ ಪ್ರದೇಶಗಳಿಗೆ ಯಾರು ಹೋಗುವಂತಿಲ್ಲ, ಅಲ್ಲಿನವರು ಹೊರಗೂ ಬರುವಂತಿಲ್ಲ.
ಕರೊನಾ ಹೆಚ್ಚಿಗೆ ಕಂಡು ಬಂದಿರುವ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಬರುವ ವಾರ್ಡ್ ಸಂಖ್ಯೆ 1, 2, 3, 8, 9, 13, 16, 17, 20, 22, 24, 26, 27, 29, 30, 33, 34, 35 ಮತ್ತು ದಕ್ಷಿಣ ಕ್ಷೇತ್ರದಲ್ಲಿ ಬರುವ ಕೆಲ ವಾರ್ಡ್ಗಳಲ್ಲಿ ಸೇರಿ ಸುಮಾರು 95 ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ಸಿದ್ಧತೆ ನಡೆದಿದೆ.
ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಜಿಲ್ಲಾಧಿಕಾರಿ ಶರತ್ ಬಿ., ಸಿಇಒ ಡಾ.ರಾಜಾ, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಪೊಲೀಸ್ ಆಯುಕ್ತ ಸತೀಶಕುಮಾರ, ಡಿಸಿಪಿ ಕಿಶೋರಬಾಬು, ಎಸ್ಪಿ ಯಡಾ ಮಾರ್ಟಿನ ಮಾರ್ಬನ್ಯಾಂಗ್ ಅವರು ಸಮಾಲೋಚನೆ ನಡೆಸಿ ಸೀಲ್ಡೌನ್ ಮಾಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಸಿಟಿವ್ ಕೇಸ್ಗಳು ಹೆಚ್ಚುತ್ತಿರುವುದರ ಜತೆಗೆ ಜನರಿಗೆ ಜಾಗೃತಿ ಮೂಡಿಸಲು ತೆರಳುವ ಕರೊನಾ ವಾರಿಯರ್ಸ್ ಮೇಲೆ ದಾಳಿ ಪ್ರಕರಣಗಳು ನಡೆದಿರುವುದರಿಂದ ಜನರನ್ನು ಸಂಪೂರ್ಣವಾಗಿ ಕಟ್ಟಿ ಹಾಕುವ ಮೂಲಕವೇ ಕರೊನಾ ಹಿಮ್ಮೆಟ್ಟಿಸಬಹುದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಎರಡ್ಮೂರು ದಿನಗಳಲ್ಲಿ ತಾಜ ನಗರ, ಹಾಗರಗಾ ಸರ್ಕಲ್, ಬುಲಂದ್ ಪರ್ವೆಜ್ ಕಾಲನಿ ರಫೀಕ್ ಚೌಕ್, ಕೆಸಿಟಿ ಕಾಲೇಜಿನಿಂದ ರಿಂಗ್ರೋಡ್, ರಾಮಜಿ ನಗರದಿಂದ ಟಿನ್ನಿಪರ್ಲರ್ ಶಾಲೆ, ಮಿಜಗುರಿ ಮುಖ್ಯರಸ್ತೆ, ಆಜಾದಪುರ, ಎಎಸ್ಎಂ ಆಸ್ಪತ್ರೆ ರಸ್ತೆ, ಚುನ್ನಾಭಟ್ಟಿ ರಸ್ತೆ, ನೂರ್ಭಾಗ್ ರಸ್ತೆ. ಯಾಕೂಬ್ ತಹಾರಿ, ಪ್ರಕಾಶ ಏಷಿಯನ್ ಮಾಲ್ದಿಂದ ನಗರೇಶ್ವರ ಶಾಲೆ, ಎಂ.ಬಿ.ನಗರ ಮುಖ್ಯರಸ್ತೆ, ಸಂಘತ್ರಾಸವಾಡಿ ಮಸೀದಿ ರಸ್ತೆ, ಬಸವೇಶ್ವರ ಕಾಲನಿ, ಜಿಡಿಎ ಲೇಔಟ್, ಖರ್ಗೆ ಬಂಕ್ದಿಂದ ನಗರದ ಹೊರಗೆ ಹೋಗುವ ಒಂದು ರಸ್ತೆ. ವೀರೇಂದ್ರ ಪಾಟೀಲ್ ನಗರ ಪ್ರವೇಶ ದ್ವಾರ, ಹೀರಾಪುರದಿಂದ ಬಸ್ ನಿಲ್ದಾಣ ರಸ್ತೆ ಮಾರ್ಗವಾಗಿ ಮಿಚಗುರಿ ಗೋದಾಮ್, ಗಂಗಾನಗರ ಹನುಮಾನ ಟೆಂಪಲ್ ರಸ್ತೆ ಹೀಗೆ 95ಕ್ಕೂ ಹೆಚ್ಚಿನ ರಸ್ತೆಗಳನ್ನು ಸೀಲ್ಡೌನ್ ಮಾಡುವ ಮೂಲಕ ಜನರ ಓಡಾಟಕ್ಕೆ ಬ್ರೇಕ್ ಹಾಕಲಾಗುತ್ತದೆ. ಈ ರಸ್ತೆಗಳನ್ನು ಬಂದ್ ಮಾಡುವುದರ ಜತೆಗೆ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗುವುದು.
ನಗರದ ಆಯ್ದ ರಸ್ತೆಗಳನ್ನು ಸೀಲ್ ಡೌನ್ ಮಾಡಲು ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರು ಒಂದು ಸಾವಿರ ಪತ್ರಾಗಳನ್ನು ಸೊಲ್ಲಾಪುರದಿಂದ ತರಿಸಲಿದ್ದಾರೆ. ಪಾಲಿಕೆ ಮತ್ತು ಪೊಲೀಸ್ ಸಿಬ್ಭಂದಿ ಸೇರಿ ಸೀಲ್ಡೌನ್ ಮಾಡುವ ಕೆಲಸವನ್ನು ಕೂಡಲೇ ಶುರು ಮಾಡಲಾಗುವುದು. ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
| ಸತೀಶಕುಮಾರ ಎನ್
ಪೊಲೀಸ್ ಕಮೀಷನರ್