ಜಿಲ್ಲೆ

ರೂಪಾಂತರಿ ತಳಿ ನಿರ್ವಹಣೆ ಜಿಲ್ಲಾಡಳಿತಕ್ಕೆ ಸವಾಲು, ವಿಮಾನ ನಿಲ್ದಾಣದಲ್ಲಿ ವೈದ್ಯರ ದಂಡು, ತಪಾಸಣೆ ಚುರುಕು

ಬೆಂಗಳೂರು ಗ್ರಾಮಾಂತರ: ಜಿಲ್ಲಾಡಳಿತಕ್ಕೆ ಕರೊನಾ ರೂಪಾಂತರಿ ವೈರಸ್ ನಿಯಂತ್ರಣ ಸವಾಲಾಗಿದೆ. ಮೊದಲ ಹಾಗೂ ಎರಡನೇ ಅಲೆ ವೇಳೆಯೂ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿದ್ದ ಜಿಲ್ಲಾಡಳಿತ ಈಗಲೂ ತಪಾಸಣೆ ಚುರುಕುಗೊಳಿಸಿದೆ. ದೇಶ ವಿದೇಶಗಳಿಂದ ಬಂದಿಳಿದ ಪ್ರಯಾಣಿಕರನ್ನು ಕ್ವಾರಂಟೈನ್‌ಗೆ ಒಳಪಡಿಸುವುದು, ತಪಾಸಣೆ, ಚಿಕಿತ್ಸೆ ಮತ್ತಿತರ ಕಾರ್ಯಗಳ ಸವಾಲನ್ನು ಸಮರ್ಥವಾಗಿಯೇ ನಿಭಾಯಿಸಿ ಸೈ ಎನಿಸಿಕೊಂಡಿದ್ದ ಜಿಲ್ಲಾಡಳಿತ ಮತ್ತೊಮ್ಮೆ ಸವಾಲು ಎದುರಿಸಲು ಸನ್ನದ್ಧವಾಗಿದೆ.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಇನ್ನಿತರ ಅಧಿಕಾರಿಗಳು ನಿಲ್ದಾಣಕ್ಕೆ ಭೇಟಿ ನೀಡಿ ಮುಂಜಾಗ್ರತೆ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ತಂಡ ತಪಾಸಣೆ ಚುರುಕುಗೊಳಿಸಿದೆ.

ವಿದೇಶಗಳಲ್ಲಿ ವೇಗವಾಗಿ ಹರಡುತ್ತಿರುವುದರಿಂದ, ರಾಜ್ಯ ಸರ್ಕಾರ ಮುನ್ನೆಚ್ಚರಿಕೆಯಾಗಿ ನ. 26ರಂದು ಕೆಲ ಮಾರ್ಗಸೂಚಿ ಹೊರಡಿಸಿದ್ದು, ವೈದ್ಯರು ಹಾಗೂ ಸ್ಟ್ಾ ನರ್ಸ್‌ಗಳ ತಂಡ ದಿನದ 24 ಗಂಟೆ ಪ್ರಯಾಣಿಕರ ಮಾನಿಟರಿಂಗ್ ಕಾರ್ಯದಲ್ಲಿ ನಿರತವಾಗಿದೆ.

ಕೋವಿಡ್ ಪರೀಕ್ಷೆ ಕಡ್ಡಾಯ: ದಕ್ಷಿಣ ಆಫ್ರಿಕಾ ಸೇರಿ ಹೈರಿಸ್ಕ್ ದೇಶಗಳ ಪಟ್ಟಿಯಲ್ಲಿರುವ ದೇಶಗಳಿಂದ ಆಗಮಿಸುವವರಿಗೆ ಕರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಉಳಿದ ದೇಶಗಳಿಂದ ಆಗಮಿಸುವ ಪ್ರಯಾಣಿಕರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದ್ದಾರೆ.

ಹೈರಿಸ್ಕ್ ದೇಶಗಳಿಂದ ಇವರೆಗೂ 824 ಪ್ರಯಾಣಿಕರು ಆಗಮಿಸಿದ್ದು, 104 ಜನ ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದಾರೆ. ಇವರಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ವೈರಸ್ ತಳಿ ಪತ್ತೆಗೆ ಟೆಸ್ಟಿಂಗ್‌ಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ತಿಳಿಸಿದ್ದಾರೆ. ಸೋಂಕಿತರನ್ನು ನಗರದ ಖಾಸಗಿ ಹೋಟಲ್‌ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ, ಬಿಬಿಎಂಪಿ ಅಧಿಕಾರಿಗಳು ನಿಗಾವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

32 ಪ್ರಕರಣ ಸಕ್ರಿಯ: ಇದುವರೆಗೆ ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ 62088 ಕರೊನಾ ಪ್ರಕರಣ ದೃಢಪಟ್ಟಿದೆ. ಪ್ರಸ್ತುತ 32 ಸೋಂಕಿತ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 890 ಮಂದಿ ಕರೊನಾಗೆ ಬಲಿಯಾಗಿದ್ದಾರೆ.

757295 ನೆಗೆಟಿವ್: ಇದುವರೆಗೆ ಜಿಲ್ಲೆಯಲ್ಲಿ 819585 ಮಂದಿಗೆ ಕರೊನಾ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 757295 ಮಂದಿ ವರದಿ ನೆಗೆಟಿವ್ ಬಂದಿದೆ, 62088 ಸೋಂಕಿತರು ಪತ್ತೆಯಾಗಿದ್ದಾರೆ, 202 ಮಂದಿಯ ತಪಾಸಣೆ ನಡೆಸಿದ್ದು ಲಿತಾಂಶ ಬರಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.