ಬೀದರ್: ಜಿಲ್ಲೆಯ ವಿವಿಧೆಡೆ ಮಾದಕ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿದ್ದ ನೆರೆಯ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನಿಂದ ೧.೮೦ ಲಕ್ಷ ರೂ.ಮೌಲ್ಯದ ನಶೆ ಏರಿಸುವ ಗುಳಿಗೆ, ಸಿರಪ್ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಂಗಾರೆಡ್ಡಿ ಜಿಲ್ಲೆಯ ರಾಮಚಂದ್ರಪುರದ ಜಗದೀಶ್ವರ ಮೆಡಿಕಲ್ ಅಂಗಡಿಯ ಮೇದಿಶೆಟ್ಟಿ ಪ್ರಸಾದ್ ಜನಾರ್ದನ್ ಅವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಮಾರ್ಕೆಟ್ ಠಾಣೆ ವ್ಯಾಪ್ತಿಯ ದೀನ ದಯಾಳ ನಗರದ ವಿಕಾಸ ಕಸಬೆ ಹಾಗೂ ಆತನ ಸಹೋದರ ಸುದೇಶ ಕಸಬೆ ಅವರನ್ನು ಇತ್ತೀಚೆಗೆ ಮಾದಕ ವಸ್ತುಗಳೊಂದಿಗೆ ಬಂಧಿಸಲಾಗಿತ್ತು. ಮೇದಿಶೆಟ್ಟಿ ಪ್ರಸಾದ್ ಎಂಬಾತ ಮಾದಕ ವಸ್ತುಗಳನ್ನು ಸರಬರಾಜು ಮಾಡಿತ್ತಿದ್ದನು ಎಂದು ಮಾಹಿತಿ ನೀಡಿದ್ದರು. ಇದರ ಅನ್ವಯ ನಗರ ವೃತ್ತದ ಸಿಪಿಯ ಸಿಪಿಐ ಫಾಲಾಕ್ಷಯ್ಯ, ಪಿಎಸ್‌ಐ ಸಿದ್ದಣ್ಣ ಗಿರಿಗೌಡರ, ಎಎಸ್‌ಐ ನಾರಾಯಣ, ಸಿಬ್ಬಂದಿ ಸಿದ್ರಾಮ, ಈರಾರೆಡ್ಡಿ, ಆರೀಫ್, ಕಮಲಾಕರ್, ಶಿವರಾಜ, ಮುತ್ತಣ್ಣ ತಂಡವು ಕಾರ್ಯಾಚರಣೆ ನಡೆಸಿ ಮೇದಿಶೆಟ್ಟಿಯನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ತೆಲಂಗಾಣದ ವ್ಯಕ್ತಿಯನ್ನು ನಮ್ಮ ಪೊಲೀಸ್ ತಂಡ ಬಂಧಿಸಿದೆ. ವೈದ್ಯರ ಸಲಹೆ ಇಲ್ಲದೆ ಅನಧಿಕೃತವಾಗಿ ಮಾದಕ ವಸ್ತುಗಳನ್ನು ಬಂಧಿತನು ಸರಬರಾಜು ಮಾಡುತ್ತಿದ್ದ.
| ಪ್ರದೀಪ್ ಗುಂಟಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ