ಕಳಸ ಗ್ರಾಪಂ ಅಬ್ಬುಗುಡಿಗೆ ಸೇತುವೆಯನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು. ಕೆ.ಆರ್.ಪ್ರಭಾಕರ್, ಶ್ರೇಣಿಕ್, ವೀರೇಂದ್ರ, ಕೆ.ಸಿ.ಮಹೇಶ್ ಇತರರಿದ್ದರು.  
ಜಿಲ್ಲೆ

ರೂ.5 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣ

ಕಳಸ: ಶಾಸಕಿ ನಯನಾ ಮೋಟಮ್ಮ ತಾಲೂಕಿನ ಕೆಲವೆಡೆ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿದರು.

ಕಳಸ ತಾಲೂಕು, ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಕೆರೆ ಅಂಗನವಾಡಿ ಉದ್ಘಾಟನೆ ಮಾಡಿ ಕಳಸ ಅಣ್ಣಪ್ಪ ನಗರ ರಸ್ತೆಗೆ 10 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು. ನಂತರ ತಾಪಂನಲ್ಲಿ ಕಳಸ ತಾಲೂಕು ಮಟ್ಟದ ಗ್ಯಾರಂಟಿ ಕಚೇರಿ ಉದ್ಘಾಟಿಸಿದರು. 55 ಲಕ್ಷ ರೂ. ಮೊತ್ತದ ಅಬ್ಬುಗುಡಿಗೆ ಸೇತುವೆ ಉದ್ಘಾಟನೆ ಮಾಡಿ, ಸಂಸೆ ಗ್ರಾಪಂ ವ್ಯಾಪ್ತಿಯ ಮಳ್ಳೋಡಿ ರಸ್ತೆಗೆ 5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ, ಕೊಟ್ಟಿಗೆಹಾರ-ಕಳಸ ರಸ್ತೆಯಿಂದ ಮರಸಣಿಗೆ ಗಾಳಿಗಂಡಿ ತೊಡ್ಲು ಮಾರ್ಗವಾಗಿ ಕುದುರೆಮುಖ-ಕಳಸ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ 2 ಕೋಟಿ ರೂ. ವೆಚ್ಚದ ಅಭಿವದ್ಧಿಗೆ ಚಾಲನೆ ನೀಡಿದರು. 2 ಕೋಟಿ ವೆಚ್ಚದಲ್ಲಿ ಹಿರೇಬೈಲು-ಮಲ್ಲೇಶನಗುಡ್ಡ-ಬಾಳೆಹೊಳೆ ರಸ್ತೆಯಿಂದ ನಾಗಮಕ್ಕಿ ಮೂಲಕ ಮರಸಣಿಗೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ತಾಲೂಕಿನ ಇನ್ನೂ ಬಹಳಷ್ಟು ರಸ್ತೆಗಳ ಅಭಿವದ್ಧಿ ಕಾಮಗಾರಿಗಳು ಆಗಬೇಕಾಗಿದೆ. ಹಂತ ಹಂತವಾಗಿ ಕಾಮಗಾರಿ ಮಾಡಲಾಗುವುದು. ಕಳಸದಲ್ಲಿ ಮಿನಿ ವಿಧಾನಸೌಧ ಮಾದರಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ 5 ಕೋಟಿ ರೂ. ಮಂಜೂರಾಗಿದೆ. ಈಗಿನ ನಾಡ ಕಚೇರಿ ನಿವೇಶನದಲ್ಲೇ 2 ಮಹಡಿ ಕಟ್ಟಡ ಕಾಮಗಾರಿ ಆರಂಭ ಆಗಲಿದೆ. ಪ್ರಜಾಸೌಧದಲ್ಲಿ ತಹಸೀಲ್ದಾರ್ ಕಚೇರಿ ಜತೆಗೆ ಉಪನೋಂದಣಾಧಿಕಾರಿ, ಸರ್ವೇ, ಆಹಾರ ಇಲಾಖೆ ಜತೆಗೆ ಮತ್ತಿತರ ಇಲಾಖೆಗಳು ಕಾರ್ಯಾರಂಭ ಆಗಲಿವೆ ಎಂದು ಹೇಳಿದರು.

ಕಳಸ ಸಮೀಪದ ಹಿನಾರಿ ಬಳಿ ಸರ್ವೇ ನಂ 90ರಲ್ಲಿ ಅಗ್ನಿಶಾಮಕ ದಳದ ಕಟ್ಟಡಕ್ಕೂ 3.5 ಕೋಟಿ ರೂ. ಮಂಜೂರಾಗಿದೆ. ಕಳಸ ಆಸ್ಪತ್ರೆಗೆ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ. ಕಡ್ಡಾಯ ಗ್ರಾಮೀಣ ಸೇವೆಯಡಿ ವೈದ್ಯರನ್ನು ನೇಮಕ ಮಾಡಲು ಸಂಬಂಧಪಟ್ಟವರಿಗೆ ತಿಳಿಸಿದ್ದೇನೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆರೋಗ್ಯ ಕೇಂದ್ರವನ್ನಾಗಿ ಮಾಡಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್, ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಳಸ ಅಧ್ಯಕ್ಷ ಗಣೇಶ್ ಭಟ್, ಕಾಂಗ್ರೆಸ್ ಮುಖಂಡರಾದ ವೀರೇಂದ್ರ, ಕೆ.ಸಿ.ಮಹೇಶ್, ವಿಶ್ವನಾಥ್, ರಾಜೇಂದ್ರ ಹೆಬ್ಬಾರ್, ಮಹಮ್ಮದ್ ರಫೀಕ್, ಸುಜಿತ್, ಉದಯ್, ರಾಜಪ್ಪ ಗೌಡ, ಕಳಸ ಗ್ರಾಪಂ ಅಧ್ಯಕ್ಷೆ ಉಷಾ ವಿಶ್ವನಾಥ ಇದ್ದರು.