ಚಿತ್ರದುರ್ಗ: ಠೇವಣಿ, ಷೇರುದಾರರ ಸಂಖ್ಯೆ ಹೆಚ್ಚಿದರೆ ಬ್ಯಾಂಕ್ ಆರ್ಥಿಕವಾಗಿ ಇನ್ನಷ್ಟು ಸದೃಢವಾಗಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಸೋಮವಾರ ಬ್ಯಾಂಕಿನ 61ನೇ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯದ ಅನೇಕ ಡಿಸಿಸಿ ಬ್ಯಾಂಕ್‌ಗಳು ಸುಭದ್ರವಾಗಿದ್ದರೆ, ಇನ್ನು ಕೆಲವು ಅಭದ್ರವಾಗಿವೆ. ರಾಜಕಾರಣ ನುಸುಳದಿದ್ದರೆ ಉತ್ತಮ ಹಣಕಾಸು ಸಂಸ್ಥೆಯಾಗಿ ಬ್ಯಾಂಕ್‌ಗಳು ಬೆಳೆದು ರೈತರಿಗೆ ನೆರವಾಗಲು ಸಾಧ್ಯವಾಗಲಿವೆ ಎಂದರು.
2004ರಿಂದ ಈಚೆಗೆ ಉತ್ತಮ ಬೆಳವಣಿಗೆ ಕಂಡಿರುವ ಚಿತ್ರದುರ್ಗ ಡಿಸಿಸಿ ಬ್ಯಾಂಕ್‌ನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ. ನಮ್ಮ ಬ್ಯಾಂಕ್‌ಗೆ ದೇಶ, ರಾಜ್ಯದಲ್ಲಿ ಉತ್ತಮ ಹೆಸರಿದೆ ಎಂದು ತಿಳಿಸಿದರು.
ಆರ್‌ಬಿಐ, ನಬಾರ್ಡ್‌ನ ನೂರೆಂಟು ಕಂಡಿಷ್‌ನ್‌ಗಳಿಂದಾಗಿ ಅನೇಕ ಸೊಸೈಟಿಗಳು ಮುಚ್ಚುವಂತಾಗಿವೆ. ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಕಣ್ಣಲ್ಲಿ ಕಣ್ಣಿಟ್ಟು ಆಡಳಿತ ನಡೆಸಬೇಕು. ಸೊಸೈಟಿಗಳಿಗೆ ಆಯ್ಕೆಯಾದ ಬಳಿಕ ಕೆಲವರು ತಿರುಗಿ ನೋಡುವುದಿಲ್ಲ. ಸುಸ್ತಿ ಮೊತ್ತ 30 ಕೋಟಿ ರೂ. ವಸೂಲಿಗೆ ಫ್ಯಾಕ್ಸ್‌ಗಳು ಕ್ರಮ ವಹಿಸಬೇಕು ಎಂದು ಹೇಳಿದರು.
ಮರಣ ಹೊಂದಿದ ಸುಸ್ತಿದಾರರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ತುಮಕೂರಲ್ಲಿ ಏನು ಕ್ರಮವಾಗಿದೆ ಎಂಬುದನ್ನು ಪರಿಶೀಲಿಸಲಾಗುವುದು. ಹೆಚ್ಚಿನ ಠೇವಣಿ, ೇರು ಮೊತ್ತ ಸಂಗ್ರಹಕ್ಕೆ ಫ್ಯಾಕ್ಸ್‌ಗಳು ಶ್ರಮಿಸಬೇಕು. ಸೇವಾ ಬದ್ಧತೆಯನ್ನು ಹೊಂದಿರುವ ಬ್ಯಾಂಕ್ ಎಂಡಿ ಇಲ್ಯಾಸ್‌ಉಲ್ಲಾ ಷರೀಫ್ ಅವರನ್ನು ಮುಂದುವರಿಸಲಾಗಿದೆ. ಸಭೆ ಸಲಹೆಗಳ ಪರಾಮರ್ಶಿಸುವುದಾಗಿ ತಿಳಿಸಿದರು.
ಜಿಲ್ಲೆಯ ಉತ್ತಮ ಸಾಧನೆ ತೋರಿದ ಫ್ಯಾಕ್ಸ್‌ಗಳ ಅಧ್ಯಕ್ಷರು, ಕಾರ‌್ಯದರ್ಶಿಗಳನ್ನು ಗೌರವಿಸಲಾಯಿತು. ಬ್ಯಾಂಕಿನ ಉಪಾಧ್ಯಕ್ಷ ಎಚ್.ಬಿ.ಮಂಜುನಾಥ್, ನಿರ್ದೇಶಕರಾದ ಟಿ.ಮಹಾಂತೇಶ್, ಮಾಧುರಿಗಿರೀಶ್, ಎಚ್.ಟಿ.ನಾಗಿರೆಡ್ಡಿ, ಪಿ.ರಾಜು, ಎಂ.ನಿಶಾನಿ ಜಯಣ್ಣ, ಸಿ.ವೀರಭದ್ರಬಾಬು, ಪಿ.ವಿನೋದಸ್ವಾಮಿ, ಕೆ.ಜಗಣ್ಣ, ಅಪೆಕ್ಸ್ ಬ್ಯಾಂಕ್ ನಾಮಿನಿ ರಘುರಾಮ್‌ರೆಡ್ಡಿ, ಸಹಕಾರ ಸಂಘಗಳ ಉಪ ನಿಬಂಧಕ ಆರ್.ಎಸ್.ದಿಲೀಪ್‌ಕುಮಾರ್, ವೃತ್ತಿ ಪರ ನಿರ್ದೇಶಕರಾದ ಎಚ್.ಎಂ.ದ್ಯಾಮಣ್ಣ, ಎಸ್.ಕೆ.ಮುರಳಿ ಇತರರು ಇದ್ದರು. ವೀರೇಶ್‌ಬಾಬು ವಂದಿಸಿದರು.
*ಸೆ.9ರಂದು ಚುನಾವಣೆ
ಕಳೆದ ಐದು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಬ್ಯಾಂಕಿನ ಆಡಳಿತ ಮಂಡಳಿ ಕೋವಿಡ್, ಬರದಿಂದಾಗಿ ಅನೇಕ ಸವಾಲುಗಳನ್ನು ಎದುರಿಸಿದೆ. 2024 ಸೆಪ್ಟೆಂಬರ್ 9ರಂದು ಮತ್ತೆ ಚುನಾವಣೆ ನಡೆಯಲಿದೆ ಎಂದು ಬ್ಯಾಂಕ್ ನಿರ್ದೇಶಕ, ಶಾಸಕ ಟಿ.ರಘುಮೂರ್ತಿ ತಿಳಿಸಿದರು. ಸಹಕಾರಿ ಕ್ಷೇತ್ರದಲ್ಲಿ ಲಾಭಕ್ಕಿಂತ ಸೇವೆ ಮುಖ್ಯ. ಪದೇ ಪದೆ ಬರಕ್ಕೆ ತುತ್ತಾಗುವ ದೇಶದ 16 ಜಿಲ್ಲೆಗಳಲ್ಲಿ ಚಿತ್ರದುರ್ಗವೂ ಒಂದು. ಭದ್ರಾ ಮೇಲ್ದಂಡೆ ಯೋಜನೆಗೆ ಪೂರಕವಾಗಿ ಬ್ಯಾಂಕ್‌ನಿಂದ ಸೂಕ್ತ ಆರ್ಥಿಕ ಯೋಜನೆ ರೂಪಿಸುವ ಕುರಿತು ಚಿಂತಿಸಲಾಗುವುದು ಎಂದರು.
*ಲಾಭದ ಗುರಿ 12 ಕೋಟಿ ರೂ.
ಕಳೆದ ಸಾಲಿನ 11.84 ಕೋಟಿ ರೂ. ಲಾಭದಲ್ಲಿ, ಲಭ್ಯ ನಿವ್ವಳ ಮೊತ್ತ 2.65 ಕೋಟಿ ರೂ., ಸದಸ್ಯರಿಗೆ ಶೇ.3ರಂತೆ ಡಿವಿಡೆಂಡ್ ಕೊಡಲಾಗುವುದು ಹಾಗೂ 28 ಲಕ್ಷ ರೂ. ಗಳನ್ನು ಕಟ್ಟಡ ನಿಧಿಗೆ ವರ್ಗಾಯಿಸಲಾಗಿದೆ ಎಂದು ಇಲ್ಯಾಸ್ ಉಲ್ಲಾ ಷರೀಫ್ ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ 4 ಸಾವಿರ ಹೊಸ ರೈತರಿಗೆ ಬೆಳೆ ಸಾಲ, 1 ಸಾವಿರ ಹೊಸ ರೈತರಿಗೆ ಭೂ ಅಭಿವೃದ್ಧಿ ಸಾಲ ವಿತರಣೆ ಗುರಿ ಇದೆ. ಹೊಸ 8 ಸಹಿತ ಜಿಲ್ಲೆಯಲ್ಲಿ 22 ಶಾಖೆಗಳಿವೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ 12 ಕೋಟಿ ರೂ. ಅಧಿಕ ಲಾಭದ ಗುರಿ ಇದೆ ಎಂದರು.