ಬೀದರ್: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.18 ಕೋಟಿ ರೂ. ಮೌಲ್ಯದ 118 ಕೆಜಿ ಗಾಂಜಾ ಮನ್ನಾಎಖೇಳ್ಳಿ ಠಾಣೆ ಪೊಲೀಸರು ರಾಷ್ಟ್ರೀಯ ಹೆದ್ದಾರಿ 65ರಲ್ಲಿ ವಶಪಡಿಸಿಕೊಂಡಿದ್ದಾರೆ.
ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾಯರ್ಾಚರಣೆ ನಡೆಸಿದ್ದಾರೆ. ಮಂಗಲಗಿ ಟೋಲ್ ಪ್ಲಾಜಾ ಹತ್ತಿರ ಪೊಲೀಸರು ನಿಂತಿರುವುದನ್ನು ಗಮನಿಸಿದ ಚಾಲಕ ಕಾರನ್ನು ಹಿಂದಿರುಗಿಸಿಕೊಂಡು ಮನ್ನಾಎಖೇಳ್ಳಿ ಕಡೆಗೆ ಓಡಿ ಹೋಗಲು ಯತ್ನಿಸಿದ್ದಾನೆ. ಸಿನಿಮಿಯ ರೀತಿಯಲ್ಲಿ ಖಾಕಿ ಪಡೆ ದಾಳಿ ನಡೆಸಿ ಗಾಂಜಾ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಲಂಗೋಟಿ ತಿಳಿಸಿದ್ದಾರೆ.
ಮನ್ನಾಎಖೇಳ್ಳಿಯ ಎಂ ಆರ್ ಎಫ್ ಟೈರ್ ಶೋ ರೂಂ ಹತ್ತಿರ ಕಾರು ನಿಲ್ಲಿಸಿ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. 118 ಕೆಜಿ ಗಾಂಜಾ ಹಾಗೂ 8 ಲಕ್ಷ ಮೌಲ್ಯದ ಕಾರು ಜಪ್ತಿ ಮಾಡಲಾಗಿದೆ. ಪರಾರಿಯಾದವರು ಮಹಾರಾಷ್ಟ್ರ ಮೂಲದವರು ಇರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಇವರ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಹುಮನಾಬಾದ್ ಎಎಸ್ಪಿ ಶಿವಾಂಶು ರಜಪೂತ, ಚಿಟಗುಪ್ಪ ಸಿಪಿಐ ಮಹೇಶಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ಪಿಎಸ್ಐ ಬಸವರಾಜ ಚಿತಕೋಟಿ ನೇತೃತ್ವ ತಂಡ ಕಾರ್ಯಾಚರಣೆ ನಡೆಸಿದೆ. ತಂಡಕ್ಕೆ ನಗದು ಬಹುಮಾನ ಘೋಷಣೆ ಮಾಡಲಾಗಿದೆ.
ಮಹಿಳೆ ಕೊಲೆ ಇಬ್ಬರ ಬಂಧನ
ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಲಂಗೋಟಿ ತಿಳಿಸಿದರು. ಮಾಳೆಗಾಂವ ಗ್ರಾಮದ ಲಕ್ಷ್ಮೀ ಸುನೀಲ (27) ಕೊಲೆಯಾದ ಮಹಿಳೆ. ಇಲ್ಲಿನ ಹೌಂಸಿಂಗ್ ಬೋಡ್೯ ಕಾಲನಿಯಲ್ಲಿನ ಮಾಳೆಗಾಂವ ಗ್ರಾಮದ ರಾಜಕುಮಾರ ಪಾಟೀಲ್ ಮನೆಯಲ್ಲಿ ಕತ್ತು ಹಿಸುಕಿ ಮಹಿಳೆ ಕೊಲೆ ಮಾಡಲಾಗಿದ್ದು, ಮಹಿಳೆಯ ಮೈದುನ ಹಾಗೂ ಮಾವನನ್ನು ಬಂಧಿಸಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಅನೈತಿಕ ಸಂಬಂಧದ ಕಾರಣ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.