ಜಿಲ್ಲೆ

ರುದ್ರಾಕ್ಷಿಮಠದಲ್ಲಿ ಶ್ರೀರಾಮನಿಗೆ ಪೂಜೆ

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ವಣಕ್ಕೆ ಶಿಲಾನ್ಯಾಸ ನೆರವೇರಿದ ಹಿನ್ನೆಲೆಯಲ್ಲಿ ನಗರದ ರುದ್ರಾಕ್ಷಿಮಠದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಶ್ರೀ ಬಸವಲಿಂಗ ಸ್ವಾಮೀಜಿ, ಅಯೋಧ್ಯೆಯ ರಾಮ ಮಂದಿರದಲ್ಲಿ ದೊರೆತ ಶಿವಲಿಂಗವನ್ನೂ ಪ್ರತಿಷ್ಠಾಪಿಸಬೇಕು. ಶ್ರೀ ರಾಮನು ಲಿಂಗಪೂಜೆ ನೆರವೇರಿಸಿದ ಪೌರಾಣಿಕ ಇತಿಹಾಸವಿದೆ ಎಂದರು.

ಬಸವರಾಜ ಬೆಲ್ಲದ, ಪ್ರಕಾಶ ಇನಾಮದಾರಮಠ, ಜಗದೀಶ ಬುಳ್ಳಾನವರ, ಸಂತೋಷ ಕುಂಬಾರ, ರಾಜು ಅಂಗಡಿ, ಶಿವಾನಂದ ತರ್ಲಘಟ್ಟ, ರಕ್ಷಣ ಕಟ್ಟಿಶೆಟ್ಟರ, ಕುಮಾರ ಹೊಂಗಲ, ಪ್ರಶಾಂತ ಜಾಬಿನ ಇತರರಿದ್ದರು.

ಕುಣಿದು ಕುಪ್ಪಳಿಸುವ ದಿನ
ಧಾರವಾಡ:
ಈ ದಿನ 130 ಕೋಟಿ ಹಿಂದುಗಳು ಕುಣಿದು ಕುಪ್ಪಳಿಸುವ ದಿನ. 500 ವರ್ಷಗಳ ಕನಸು ಇಂದು ನನಸಾಗಿದೆ. ಬಹಳಷ್ಟು ಜನ ರಾಮಮಂದಿರ ನಿರ್ಮಾಣ ಕಾರ್ಯ ನೋಡುತ್ತೇವೋ ಇಲ್ಲವೋ ಎಂದುಕೊಂಡಿದ್ದರು. ಕಾತರದಿಂದ ಕಾಯುತ್ತಿದ್ದ ಅವರೆಲ್ಲರ ಜೀವನ ಇಂದು ಸಾರ್ಥಕವಾಗಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶೋಕ ಸಿಂಘಾಲ್ ಮಾರ್ಗದರ್ಶನ, ಅವರ ಸೂತ್ರದಲ್ಲಿ 30 ವರ್ಷ ಹೋರಾಟ ನಡೆದಿತ್ತು. ಅವರು ಇಂದು ನಮ್ಮೊಂದಿಗೆ ಇಲ್ಲ. ಅವರು ತಮ್ಮ ಜೀವನ ಕೊನೆ ಗಳಿಗೆಯಲ್ಲಿ, ಮಂದಿರ ನಿರ್ವಣಕ್ಕಾಗಿ ಒಂದು ಕಲ್ಲಾದರೂ ಇಡಿ. ನೋಡಿ ಸಾಯುತ್ತೇನೆ ಎಂದಿದ್ದರು. ಇಂದು ಅವರ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದರು.

ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥರ ಸ್ವಾಮಿಗಳ ನೇತೃತ್ವದಲ್ಲಿ ಶ್ರೇಷ್ಠ ಕಾರ್ಯ ಆಗಿತ್ತು. ಈಗ ಅವರ ಕಾರ್ಯವೂ ಸಫಲವಾಗಿದೆ. ಸಾವಿರಾರು ಜನರ ತ್ಯಾಗಕ್ಕೆ ಪ್ರತಿಫಲ ಸಿಕ್ಕಿದೆ ಎಂದರು. ಇದರಲ್ಲಿ ಏಕತೆ, ಸಮಾನತೆ ಇದೆ. ಇಡೀ ರಾಷ್ಟ್ರ ಜೈ ಶ್ರೀರಾಮ, ಜೈ ಭಾರತ ಭಾವನೆಯಿಂದ ಕೂಡಿದೆ ಎಂದು ಬಣ್ಣಿಸಿದರು.