ದಾವಣಗೆರೆ: ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಅಗೌರವ ತೋರಿದ ಬಿಜೆಪಿ, ಜೆಡಿಎಸ್ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ದಾವಣಗೆರೆ ಜಿಲ್ಲಾ ಬಂಜಾರ ಸಂಘ ಆಗ್ರಹಿಸಿದೆ.
ವಿಧಾನಸಭೆ ಕಲಾಪದ ವೇಳೆ ಕಾಂಗ್ರೆಸ್ ಸರ್ಕಾರ ಮಂಡಿಸಿದ ಕೆಲ ಮಸೂದೆಗಳ ಪ್ರತಿಗಳನ್ನ್ನು ಹರಿದು ಸಭಾಧ್ಯಕ್ಷರ ಪೀಠದತ್ತ ಎಸೆಯುವ ಮೂಲಕ ರುದ್ರಪ್ಪ ಲಮಾಣಿ ಅವರನ್ನು ಅವಮಾನಿಸಲಾಗಿದೆ. ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾಡಿದ ಅಕ್ಷಮ್ಯ ಅಪರಾಧವಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಸ್.ನಂಜಾನಾಯ್ಕ, ಕಾರ್ಯದರ್ಶಿ ಕೆ.ಆರ್. ಮಲ್ಲೇಶನಾಯ್ಕ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆರ್. ಅಶೋಕ್, ಡಾ.ಸಿ.ಎನ್. ಅಶ್ವತನಾರಾಯಣ, ಆರಗ ಜ್ಞಾನೇಂದ್ರ, ಸುನೀಲ್‌ಕುಮಾರ್, ವೇದವ್ಯಾಸ ಕಾಮತ್, ಯಶಪಾಲ್ ಸುವರ್ಣ, ಧೀರಜ್, ಮುನಿರಾಜು, ಭರತ್ ಶೆಟ್ಟಿ, ಅರವಿಂದ ಬೆಲ್ಲದ್, ಉಮಾನಾಥ್ ಕೊಟ್ಯಾನ್ ಮತ್ತು ಇದರಲ್ಲಿ ಭಾಗಿಯಾದ ಎಲ್ಲಾ ಶಾಸಕರ ವಿರುದ್ಧ ಕಠಿಣ ಕ್ರಮ ಆಗಬೇಕು. ಈ ಎಲ್ಲ ಶಾಸಕರು ಕ್ಷಮೆ ಕೇಳಬೇಕು. ಅವರೆಲ್ಲರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಯಾವ ರಾಜ್ಯದಲ್ಲೂ ಇಂತಹ ಅಗೌರವ ನಡೆದಿಲ್ಲ. ಸಂವಿಧಾನವನ್ನು ಅವಮಾನಿಸುವ ಕೃತ್ಯವಾಗಿಲ್ಲ. ದಮನಿತರು, ದಲಿತರು, ಅಲೆಮಾರಿಗಳು ಮತ್ತು ತುಳಿತಕ್ಕೆ ಒಳಗಾದವರು ಮೇಲ್ಮಟ್ಟದ ರಾಜಕಾರಣದಲ್ಲಿದ್ದರೆ ಬಿಜೆಪಿಗರಿಗೆ ಸಹಿಸಲಾಗದು ಎಂಬುದಕ್ಕೆ ಇದು ನಿದರ್ಶನವಾಗಿದೆ. ರಾಜ್ಯದ ಎಲ್ಲಾ ತುಳಿತ, ದಮನಿತ ಸಮಾಜದ ಮುಖಂಡರೊಂದಿಗೆ ಚರ್ಚಿಸಿ, ಮುಂದಿನ ಹೋರಾಟದ ರೂಪರೇಷೆಗಳನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್. ಬಸವರಾಜಯ್ಯ, ಲಕ್ಷ್ಮಣ್ ರಮಾವತ್, ಸಂದೇಶ್ ನಾಯ್ಕ, ಗುರುಮೂರ್ತಿ ಮಿಯಾಪುರ, ಲಿಂಗರಾಜ, ರವಿನಾಯ್ಕ ಇದ್ದರು.