ಹುಣಸೂರು ತಾಲೂಕಿನ ಕೊಳವಿಗೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿರುವ ಶಿವನ ಆಕರ್ಷಕ ಮೂರ್ತಿ. 
ಜಿಲ್ಲೆ

ರುದ್ರನಿಗೆ ವಿಶೇಷ ಪೂಜಾ ಕೈಂಕರ್ಯ

ಹುಣಸೂರು: ಮಹಾಶಿವರಾತ್ರಿ ಅಂಗವಾಗಿ ತಾಲೂಕಿನಾದ್ಯಂತ ಶಿವ ದೇವಾಲಯಗಳಲ್ಲಿ ರುದ್ರನಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.

ತಾಲೂಕಿನ ಹನಗೋಡು ಹೋಬಳಿ ಕಲ್ಲೂರಪ್ಪನಬೆಟ್ಟದ ಮೇಲೆ ವಿರಾಜಮಾನನಾಗಿರುವ ಕಲ್ಲೂರೇಶ್ವರಸ್ವಾಮಿ ದೇವಾಲಯದಲ್ಲಿ ಶನಿವಾರ ಬೆಳಗ್ಗೆ ಕೊಂಡೋತ್ಸವ ನೆರವೇರಿತು. ಶಿವನಿಗೆ ರುದ್ರಾಭಿಷೇಕ, ಶಿವಾಷ್ಟೋತ್ತರ ಶತನಾಮಾವಳಿ ಪಠಣ ನಡೆಯಿತು. ಸಂಜೆ ದೇವರಿಗೆ ಎಣ್ಣೆಮಜ್ಜನ, ರಾತ್ರಿಯಿಡೀ ಜಾಗರಣೆ ಅಂಗವಾಗಿ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.

ನಾಗರಹೊಳೆ ಉದ್ಯಾನದಂಚಿನಲ್ಲಿರುವ ಕೊಳವಿಗೆ ರಾಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಗಿನ ವಿಶೇಷ ಪೂಜೆಯೊಂದಿಗೆ ಜಾಗರಣೆ ನಡೆಯಿತು. ಅಲ್ಲದೆ ರಾಮೇನಹಳ್ಳಿ ಬೆಟ್ಟದ ಮೇಲಿರುವ ಓಂಕಾರೇಶ್ವರ ಸ್ವಾಮಿ ದೇವಾಲಯದಲ್ಲಿಯೂ ಓಂಕಾರೇಶ್ವರನಿಗೆ ವಿಶೇಷ ಪೂಜೆಗಳು ನೆರವೇರಿತು.

ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಸಮುಚ್ಛಯದಲ್ಲಿನ ಶಿವ ದೇವಾಲಯದಲ್ಲಿ ಭಕ್ತರು ಪೂಜೆ ನೆರವೇರಿಸಿದರು. ಅಶ್ವತ್ಥ ಮರ ಸುತ್ತುಹಾಕಿದ ಭಕ್ತರು, ನಾಗದೇವರ ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸಿದರು. ತಾಲೂಕಿನ ಗದ್ದಿಗೆ ಮಹದೇಶ್ವರಸ್ವಾಮಿ, ಕೆಂಡಗಣ್ಣೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಅನ್ನದಾಸೋಹ ನೆರವೇರಿತು.

ಸಿಂಗರಮಾರನಹಳ್ಳಿಯ ಭೈರವೇಶ್ವರ ಬೆಟ್ಟದ ದೇವಾಲಯದಲ್ಲಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. ಬಿಳಿಕೆರೆಯ ಮಲ್ಲಿಕಾರ್ಜುನಸ್ವಾಮಿ ದೇವಾಲಯ, ಮಾದಹಳ್ಳಿಯ ಮಠದಲ್ಲಿ, ಹುಣಸೂರು-ಕೆ.ಆರ್.ನಗರ ರಸ್ತೆಯ ಶ್ರೀ ಶನೈಶ್ಚರಸ್ವಾಮಿ, ಬ್ರಾಹ್ಮಣರ ಬೀದಿಯ ಚಂದ್ರಮೌಳೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು.