ಚಾಮರಾಜನಗರ: ಪುಣಜನೂರು ಹಾಗೂ ಕೋಳಿಪಾಳ್ಯ ಗ್ರಾಮದ ಜನರಿಗೆ ಅಂತ್ಯ ಸಂಸ್ಕಾರ ನೆರವೇರಿಸಲು ಜಾಗ ಗುರುತಿಸಿಕೊಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್, ನಾಗ ನಾಯ್ಕ ಹಾಗೂ ಗೀತಾ ಒತ್ತಾಯಿಸಿದರು.
ತಾಲೂಕಿನ ಪುಣಜನೂರು ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗಡಿಭಾಗ ಪುಣಜನೂರು ಹಾಗೂ ಕೋಳಿಪಾಳ್ಯ ಗ್ರಾಮದಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ, ಲಂಬಾಣಿ ಹಾಗೂ ಈಡಿಗ ಸಮಾಜದ ಜನರು ವಾಸಿಸುತ್ತಿದ್ದು, ಯಾರಾದರು ಮೃತಪಟ್ಟರೆ ಅವರಿಗೆ ಅಂತ್ಯ ಸಂಸ್ಕಾರ ನೆರವೇರಿಸಲು ಸಮಸ್ಯೆ ಉಂಟಾಗಿದೆ. ಅರಣ್ಯಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು ಅಧಿಕಾರಿಗಳು ಬಿಡುತ್ತಿಲ್ಲ. ಹೀಗಾಗಿ ಪಂಚಾಯಿತಿಗೆ ಸೇರಿರುವ ಜಾಗ ಇರುವುದರಿಂದ ಎರಡು ಗ್ರಾಮಗಳಲ್ಲಿ ಜಾಗ ಗುರುತಿಸಬೇಕೆಂದು ಮನವಿ ಮಾಡಿದರು.
ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇದರಿಂದ ರೈತರಿಗೆ ಹಾಗೂ ಗ್ರಾಮದ ಜನರಿಗೆ ತುಂಬಾ ತೊಂದರೆ ಉಂಟಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೂ ಅಡಚಣೆ ಉಂಟಾಗಿದೆ. ಹೀಗಾಗಿ ಕೂಡಲೇ ಅಧಿಕಾರಿಗಳಿಗೆ ಪತ್ರ ಬರೆಯಬೇಕೆಂದು ಸದಸ್ಯರು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಿಬಾಯಿ ಗಣೇಶ್ ನಾಯ್ಕ ಪ್ರತಿಕ್ರಿಯಿಸಿ, ಕೂಡಲೇ ಈ ಸಂಬಂಧ ರೆಜಿಲೇಶನ್ ಮಾಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಚಪ್ಪ, ಅಭಿವೃದ್ಧಿ ಅಧಿಕಾರಿ ಮಹೇಶ್, ಗ್ರೇಡ್ 2 ಕಾರ್ಯದರ್ಶಿಗಳಾದ ನಾಗ ನಾಯ್ಕ, ಗೋವಿಂದರಾಜು ಇತರರು ಹಾಜರಿದ್ದರು.