ಚಿತ್ರದುರ್ಗ: ತಮ್ಮ ವಿರುದ್ಧ ವಾಮಾಚಾರ ಮಾಡಿಸುತ್ತಿದ್ದಾರೆಂಬ ಸಂಶಯಕ್ಕೆ ವ್ಯಕ್ತಿಯನ್ನು ಹತ್ಯೆಗೈದು ಆತನ ರುಂಡವನ್ನು ಜಮೀನೊಂದರಲ್ಲಿ ಹೂತ್ತಿಟ್ಟಿದ್ದ ಅಪರಾಧಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.
ಹಿರಿಯೂರು ತಾಲೂಕು ಶ್ರವಣಗೆರೆ ಗ್ರಾಮದ ಶ್ರೀನಿವಾಸ ಶಿಕ್ಷೆಗೆ ಒಳಗಾದ ಅಪರಾಧಿ. ಈತ ತನ್ನ ಪಕ್ಕದ ಮನೆಯ ಮಲ್ಲಣ್ಣರ ಪುತ್ರ ರಮೇಶನನ್ನು ಅವರದ್ದೇ ಮನೆಯೊಳಗೆ 2022 ಏಪ್ರಿಲ್ 7ರಂದು ತಡರಾತ್ರಿ ಮಾರಾಕಾಸ್ತ್ರಗಳಿಂದ ಕುತ್ತಿಗೆ ಕಡಿದು, ರುಂಡವನ್ನು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಹೋಗಿ ಹೂತ್ತಿಟ್ಟಿದ್ದ.
ಮಾರಾಕಾಸ್ತ್ರ ಮತ್ತಿತರ ವಸ್ತುಗಳನ್ನು ಪೊದೆಯೊಂದರಲ್ಲಿ ಬೀಸಾಡಿದ್ದ. ನೀವು ವಾಮಾಚಾರ ಮಾಡಿಸುತ್ತಿರುವುದರಿಂದಾಗಿ ನಮ್ಮ ಮನೆ ಅಭಿವೃದ್ಧಿ ಆಗುತ್ತಿಲ್ಲವೆಂದು ಶ್ರೀನಿವಾಸ, ಪದೇ ಪದೆ ಮಲ್ಲಣ್ಣ ಮತ್ತವರ ಮಕ್ಕಳೊಂದಿಗೆ ಜಗಳವಾಡುತ್ತಿದ್ದ.
ಕೃತ್ಯ ಸಂಭವಿಸಿದ್ದ ಸಮಯದಲ್ಲಿ ತಮ್ಮ ಮನೆ ಹೊರಗೆ ಕಟ್ಟೆಯ ಮಲಗಿದ್ದ ರಮೇಶನ ತಂದೆ ಮಲ್ಲಣ್ಣ, ಚೀಲದಲ್ಲಿ ಏನೋ ತೆಗೆದುಕೊಂಡು ಹೋಗುತ್ತಿದ್ದನ್ನು ಗಮನಿಸಿ ಮಾತನಾಡಿಸಿದರೂ ಮಾತನಾಡದೆ, ಚೀಲ ಹಿಡಿದು ಹೋಗಿದ್ದ ಶ್ರೀನಿವಾಸನನ್ನು ನೋಡಿದ್ದರು. ಬಳಿಕ ಮಗ ಕೊಲೆಯಾಗಿದ್ದು ಗೊತ್ತಾಗಿ ಮಲ್ಲಣ್ಣ, ಅಬ್ಬಿನಹೊಳೆ ಪೊಲೀಸರಿಗೆ ದೂರು ನೀಡಿದ್ದರು.
ಹಿರಿಯೂರು ಸಿಪಿಐ ಕೆ.ಆರ್.ರಾಘವೇಂದ್ರ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲ್ಕನಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಪರ ಸರ್ಕಾರಿ ಅಭಿಯೋಜಕ ಎನ್.ಎಸ್.ಮಲ್ಲಯ್ಯ ವಾದಿಸಿದ್ದರು.