ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರತಿ ಭಾಗಗಳಿಗೂ ಪ್ರಗತಿ ರಥ ವಾಹನ ತೆರಳಿ ಪ್ರಚಾರ ಮಾಡಲಿದೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ಒಳಗೊಂಡ ಕಿರುಚಿತ್ರವನ್ನು ಈ ಪ್ರಗತಿ ರಥದಲ್ಲಿ ತಿಳಿಸಲಾಗುವುದು ಎಂದು ಶಾಸಕ ಪ್ರೀತಂ ಜೆ. ಗೌಡ ತಿಳಿಸಿದರು.
ನಗರದ ಎಂ.ಜಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಎದುರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತದಲ್ಲಿ ಜಾರಿಗೆ ಬಂದ ಹತ್ತು ಹಲವು ಯೋಜನೆ ಕಾರ್ಯಕ್ರಮಗಳನ್ನು ಜನರಿಗೆ ಪ್ರೊಜೆಕ್ಟರ್ ಮೂಲಕ ತಿಳಿಸುವ ಪ್ರಗತಿ ರಥದ ಐದು ವಾಹನಕ್ಕೆ ಶುಕ್ರವಾರ ಪಕ್ಷದ ಬಾವುಟ ಪ್ರದರ್ಶಿಸುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಅವರು ಡಬಲ್ ಇಂಜಿನ್ ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದರು.
ಕಳೆದ ಮೂರೂವರೆ ವರ್ಷಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಈಗಿನ ಸಿ.ಎಂ ಬಸವರಾಜು ಬೊಮ್ಮಾಯಿ ಅವರ ಕೊಡುಗೆಯೂ ಸಾಕಷ್ಟಿದೆ. ಉಭಯ ಸರ್ಕಾರಗಳು ನೀಡಿರುವ ಯೋಜನೆಗಳನ್ನು ಪ್ರತಿ ಮನೆ ಮನೆಗೂ ತಿಳಿಸಲು ಅಧಿಕೃತವಾಗಿ ಹಾಸನ ನಗರದಲ್ಲಿ ಚಾಲನೆ ಕೊಡಲಾಗಿದೆ ಎಂದರು.
2023ರ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಹೊಂದಿದ್ದು, ಅದರ ಸರ್ಕಾರಕ್ಕೆ ಈ ರಥದ ಮೂಲಕ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಗ್ರಾಮಾಂತರ ಉಪಾಧ್ಯಕ್ಷ ಗುರುಪ್ರಸಾದ್, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹರ್ಷಿತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಹುಲ್ ಕಿಣಿ, ಗೋಪಿನಾಥ್, ಮುರುಳಿ, ಚಂದ್ರಶೇಖರ್, ದರ್ಶನ್, ಪ್ರೀತಿವರ್ಧನ್ ಇತರರು ಇದ್ದರು.