ಜಿಲ್ಲೆ

ರೀಲ್ಸ್​ ಜಗಳ, ಯುವತಿ ಆತ್ಮಹತ್ಯೆ

ತುಮಕೂರು: ರೀಲ್ಸ್​ ವಿಚಾರಕ್ಕೆ ಪ್ರೇಮಿಗಳ ನಡುವೆ ಶುರುವಾದ ಜಗಳದಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತುಮಕೂರು ತಾಲೂಕು ಹೊಸಹಳ್ಳಿ ನಿವಾಸಿ, ಪದವಿ ವ್ಯಾಸಂಗ ಮಾಡುತ್ತಿದ್ದ ಚೈತನ್ಯ(22) ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಸೋಮವಾರ ರೀಲ್ಸ್​ ಒಂದನ್ನು ಸ್ಟೇಟಸ್​ನಲ್ಲಿ ಹಾಕಿದ ವಿಚಾರವಾಗಿ ಆಕೆಯನ್ನು ಪ್ರೀತಿಸುತ್ತಿದ್ದ ಪಕ್ಕದ ಊರಿನ ಕಾರು ಚಾಲಕ ವಿಜಯ್​ ಕುಮಾರ್​ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿ ಯುವತಿ ನೇಣಿಗೆ ಶರಣಾಗಿದ್ದಾಳೆ. ತಾಯಿ ಜತೆ ವಾಸವಾಗಿದ್ದ ಚೈತನ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಕರೆ ಮಾಡಿ ವಿಜಯ್​ ಕುಮಾರ್​ಗೆ ತಿಳಿಸಿದ್ದು, ಸಂಬಂಧಿಕರು ಬಂದು ನೋಡಿದಾಗ ನೇಣಿಗೆ ಶರಣಾಗಿ ಮೃತಪಟ್ಟಿರುವುದು ಖಚಿತವಾಗಿದೆ. ಸ್ಟ್ರೀಟ್​ ಫೋಟೋಗ್ರಾಫರ್​ ಒಬ್ಬ "ಮೇಡಂ ನೀವು ಚೆನ್ನಾಗಿ ಕಾಣಿಸ್ತೀರಿ, ನಿಮ್ಮ ಫೋಟೋ ತೆಗೆಯಬಹುದೇ' ಎಂದು ಕೇಳಿ ತೆಗೆಯುವ 25 ಫೋಟೋ ರೀಲ್ಸ್​ನ್ನು ಸ್ಟೇಟಸ್​ಗೆ ಚೈತನ್ಯ ಹಾಕಿಕೊಂಡಿದ್ದರು. ಇದನ್ನು ನೋಡಿದ್ದ ಪ್ರೇಮಿ ವಿಜಯ್​ ಆಕೆಯನ್ನು ಪ್ರಶ್ನಿಸಿದ್ದೇ ಆತ್ಮಹತ್ಯೆಗೆ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಚೈತನ್ಯಾ ಸಾವಿಗೆ ಆಕೆಯ ಪ್ರೇಮಿ ವಿಜಯ್​ ಕುಮಾರ್​ ಕಾರಣ ಎಂದು ತುಮಕೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.