ಜಿಲ್ಲೆ

ರೀಲರ್ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

ಚನ್ನಪಟ್ಟಣ: ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರ ಮೇಲೆ ರೀಲರುಗಳು ನಡೆಸಿದ ದೌರ್ಜನ್ಯ ಖಂಡಿಸಿ ಹಾಗೂ ಹಲ್ಲೆ ನಡೆಸಿದ ರೀಲರ್ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ತಾಲೂಕು ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಬುಕ್ಕಸಾಗರ ಕುಮಾರ್, ಮಾರುಕಟ್ಟೆಗೆ ರೈತರು ಗೂಡನ್ನು ತರುತ್ತಾರೆ. ಅಲ್ಲಿನ ರೀಲರ್‌ಗಳು ಕಳ್ಳಮಾರ್ಗದಲ್ಲಿ ಗೂಡನ್ನು ಕಸಿಯುತ್ತಾರೆ. ಇದನ್ನು ಪ್ರಶ್ನಿಸಿದರೆ ರೈತರ ಮೇಲೆ ಹಲ್ಲೆ ಮಾಡುವ ಜತೆಗೆ ದಬ್ಬಾಳಿಕೆ ನಡೆಸುತ್ತಾರೆ. ಹಲವು ವರ್ಷಗಳಿಂದ ಅಲ್ಲಿ ಇದೇ ಪರಿಸ್ಥಿತಿ ಇದೆ. ರಾಮನಗರ ರೇಷ್ಮೆಗೂಡು ಮಾರುಕಟ್ಟೆ ಕಳ್ಳಕಾರರ ತಾಣವಾಗಿ ಬದಲಾಗಿದೆ. ಇದನ್ನು ಮಟ್ಟಹಾಕಬೇಕಾದ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಪ್ರತಿಭಟನೆ ಮಾಡಿದ್ದೇವೆ. ಮಾರುಕಟ್ಟೆ ಅವ್ಯವಸ್ಥೆ ಸರಿಯಾಗಬೇಕು, ತಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ಅವರ ಪರವಾಗಿ ಕಚೇರಿ ಶಿರಸ್ತೇದಾರ್ ಲಕ್ಷ್ಮೀದೇವಿ ಅವರು ಮನವಿಪತ್ರ ಸ್ವೀಕರಿಸಿದರು. ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಿಂಗೇಗೌಡ, ಉಪಾಧ್ಯಕ್ಷರಾದ ನೆರಳೂರು ರಾಮೇಗೌಡ, ಮೈಲನಾಯಕನ ಹೊಸಹಳ್ಳಿ ಉಮೇಶ್, ಕಾರ್ಯದರ್ಶಿ ವಿಜಯ್‌ಕುಮಾರ್ ಜಿಲ್ಲಾಕಾರ್ಯದರ್ಶಿ ಗರಕಹಳ್ಳಿ ಸಿದ್ದಪ್ಪ , ಯುವಮೋರ್ಚಾ ಅಧ್ಯಕ್ಷ ನಾಗವಾರ ಶಿವಕುಮಾರ್ ಮತ್ತಿತರರಿದ್ದರು.