ಜಿಲ್ಲೆ

ರಿಲ್ಯಾಕ್ಸ್ ಮೂಡ್‌ನಲ್ಲಿ ದಸರಾ ಆನೆಗಳು


ಮೈಸೂರು: ನಗರದಲ್ಲಿ ಬೀಡುಬಿಟ್ಟಿರುವ ದಸರಾ ಆನೆಗಳು ರಿಲ್ಯಾಕ್ಸ್ ಮೂಡ್‌ನಲ್ಲಿ ಕಾಲ ಕಳೆದರೆ, ಗಜಪಡೆಯನ್ನು ವೀಕ್ಷಿಸಲು ಸಾರ್ವಜನಿಕರ ಕಾತರ ಹೆಚ್ಚಿತ್ತು.

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಯಣಕ್ಕೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಭಾನುವಾರ ಚಾಲನೆ ದೊರೆಯಿತು. ಬಳಿಕ ಅಲ್ಲಿಂದ ಲಾರಿಯಲ್ಲಿ ಬಂದ ಆನೆಗಳು ನಗರದ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿವೆ. ಗಜಪಡೆಗಳು ಮತ್ತು ಅವುಗಳ ಮಾವುತರು, ಕಾವಾಡಿಗರು ವಿಶ್ರಾಂತಿ ಪಡೆದರು.

ಕಾಡಿನಿಂದ ನಾಡಿಗೆ ಬಂದಿರುವ ಅಂಬಾರಿ ಆನೆ ಅಭಿಮನ್ಯು, ಹೊಸ ಆನೆ ಮಹೇಂದ್ರ, ಕುಮ್ಕಿ ಆನೆಗಳಾದ ಕಾವೇರಿ, ಚೈತ್ರ, ಲಕ್ಷ್ಮೀ, ಮಾಜಿ ಕ್ಯಾಪ್ಟನ್ ಅರ್ಜುನ ಇತರ ಆನೆಗಳಾದ ಗೋಪಾಲಸ್ವಾಮಿ, ಧನಂಜಯ, ಭೀಮ ನಗರದ ವಾತಾವರಣದಲ್ಲಿ ಬಂಧಿಯಾದರು!

ಅಭಿಮನ್ಯುನಿಗೆ ಪ್ರತ್ಯೇಕ ವಾಸ:
ಮಾವುತರು, ಕಾವಾಡಿಗರು ಹಾಗೂ ಇಲಾಖೆ ಅಧಿಕಾರಿಗಳ ವಿಶೇಷ ಆರೈಕೆಯಲ್ಲಿ ಆನೆಗಳು ವಿಶ್ರಾಂತಿಗೆ ಜಾರಿದ್ದವು. ಇತ್ತ ಕೂಂಬಿಂಗ್ ಸ್ಪೆಷಲಿಸ್ಟ್ ಎಂದೇ ಹೆಸರು ಮಾಡಿರುವ ಅಂಬಾರಿ ಆನೆ ಅಭಿಮನ್ಯು, ಲಕ್ಷ್ಮೀ ಮತ್ತು ಚೈತ್ರಾ ಹೆಣ್ಣಾನೆಗಳೊಂದಿಗೆ ಪ್ರತ್ಯೇಕ ಸ್ಥಳದಲ್ಲಿ ವಿಶ್ರಾಂತಿ ಪಡೆಯಿತು.

ಭೀಮನಿಗೆ ಮುತ್ತಿಟ್ಟ ಅರ್ಜುನ:
ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಿಂದ ಬಂದಿರುವ ಎಳೆ ವಯಸ್ಸಿನ ಭೀಮನನ್ನು ಕಂಡ ಅರ್ಜುನ ಆನೆ ಸೊಂಡಿಲಿನಿಂದ ತನ್ನತ್ತ ಬರಸೆಳೆದು ಮುದ್ದು ಮಾಡಿತು. ಜತೆಗೆ, ತನ್ನದೇ ಹಾವಭಾವದ ಮೂಲಕ ಕುಶಲೋಪರಿ ವಿಚಾರಿಸಿತು. ಇದು ನೋಡುಗರನ್ನು ಅಚ್ಚರಿಗೊಳಿಸಿತು.
ಅತಿ ಚಿಕ್ಕ ವಯಸ್ಸಿನ ಭೀಮ(22) ಆನೆಯನ್ನು ಕಂಡ ಬಳ್ಳೆ ಆನೆ ಶಿಬಿರದ ಅರ್ಜುನ (63) ತದೇಕ ಚಿತ್ತದಿಂದ ನೋಡಿದ. ಬಳಿಕ ಭೀಮನ ಬಳಿ ತೆರಳಿ ತನ್ನ ಸೊಂಡಿಲಿನಿಂದ ಸ್ಪರ್ಶಿಸಿ, ಅಲ್ಲಿಯೇ ಪಕ್ಕದಲ್ಲಿದ್ದ ಆಲದ ಸೊಪ್ಪನ್ನು ತಿನ್ನಿಸಿತು. ಇತ್ತ ಭೀಮನೂ ತನ್ನ ಸೊಂಡಿಲಿನ ಮೂಲಕ ಅರ್ಜುನನ ಸೊಂಡಿಲನ್ನು ಬಂಧಿಯಾಗಿಸಿ ಮುತ್ತಿಕ್ಕುವ ಮೂಲಕ ಹಿರಿಯಜ್ಜನ ಪ್ರೀತಿಗೆ ಪಾತ್ರನಾದ. ಹೀಗೆ ಆರೇಳು ನಿಮಿಷ ಎರಡೂ ಆನೆಗಳು ತಮ್ಮದೇ ಆತ್ಮೀಯತೆಯ ಮೂಲಕ ಮೌನ ಸಂವಹನ ನಡೆಸಿದ್ದು ನೆರೆದವರನ್ನು ಚಕಿತಗೊಳಿಸಿತು.

ಆನೆಯೊಂದಿಗೆ ಸೆಲ್ಫಿ:
ಗಜಪಡೆ, ಅವುಗಳ ಗಾತ್ರ ಮತ್ತು ವರ್ತನೆಯ ಬಗ್ಗೆ ಕುತೂಹಲ ಇರಿಸಿಕೊಂಡಿದ್ದ ನಗರದ ವಿವಿಧ ಬಡಾವಣೆಯ ಜನರು, ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಅರಣ್ಯ ಭವನಕ್ಕೆ ಲಗ್ಗೆ ಇಟ್ಟಿದ್ದರು. ಆನೆಗಳನ್ನು ವೀಕ್ಷಿಸಿ ತಮ್ಮ ಕುತೂಹಲ ತಣಿಸಿಕೊಂಡರು. ಹಾಗೆಯೆ, ತಮ್ಮ ಮೊಬೈಲ್‌ಗಳಲ್ಲಿ ಆನೆಗಳ ಚಿತ್ರ ಸೆರೆ ಹಿಡಿಯುವ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಅರಮನೆ ಪ್ರವೇಶ:
ಗಜಪಡೆ ಆ.10ರಂದು ಅರಮನೆ ಪ್ರವೇಶಿಸಲಿದ್ದು, ಅಂದು ಬೆಳಗ್ಗೆ 7ಕ್ಕೆ ಎಲ್ಲ ಆನೆಗಳು ಅರಣ್ಯ ಭವನದಿಂದ ಕಾಲ್ನಡಿಗೆ ಮೂಲಕ ಅರಮನೆ ಜಯಮಾರ್ತಾಂಡ ದ್ವಾರದ ಬಳಿ ತೆರಳಲಿವೆ. ಬಳಿಕ 9.20ರಿಂದ 10 ಗಂಟೆಯ ಒಳಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅರಮನೆ ಆವರಣಕ್ಕೆ ಸ್ವಾಗತಿಸಲಾಗುತ್ತದೆ. ನಂತರ ನಿತ್ಯ ಆನೆಗಳಿಗೆ ಅರಮನೆಯಿಂದ ಬನ್ನಿಮಂಟಪದ ವರೆಗೆ ಕಾಲ್ನಡಿಗೆ ಮೂಲಕ ತಾಲೀಮು, ಒಣ ತಾಲೀಮು ಹಾಗೂ ಭಾರ ಹೊರುವ ತಾಲೀಮು ನಡೆಸಲಾಗುತ್ತದೆ.